ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾರ್ಗದರ್ಶಕಿ ಲಕ್ಷಿö್ಮ ಅವರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶೂ ಮತ್ತು ಜಾಕೆಟ್‌ಗಳನ್ನು ವಿತರಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಇದ್ದರು. 
ವಿಜಯನಗರ

ಸಮವಸ್ತç ಮಾರ್ಗದರ್ಶಿಗಳ ವೃತ್ತಿಪರತೆ ಗುರುತು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ
ಹೊಸಪೇಟೆ: ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಅವರು ನಮ್ಮ ಜಿಲ್ಲೆಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ರಾಯಭಾರಿಗಳು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಬಣ್ಣಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 87 ಪ್ರವಾಸಿ ಮಾರ್ಗದರ್ಶಿಗಳಿಗೆ ಶೂ ಮತ್ತು ಜಾಕೆಟ್‌ಗಳನ್ನು ವಿತರಿಸಿ ಮಾತನಾಡಿದರು.
ಸಮವಸ್ತ್ರಗಳು ಕೇವಲ ಸೌಲಭ್ಯವಲ್ಲ, ಬದಲಿಗೆ ಮಾರ್ಗದರ್ಶಿಗಳ ವೃತ್ತಿಪರತೆಯ ಗುರುತಾಗಿದೆ. ಸಮವಸ್ತ್ರ ಧರಿಸುವುದರಿಂದ ಪ್ರವಾಸಿಗರಲ್ಲಿ ವಿಶ್ವಾಸ ಮೂಡುವುದಲ್ಲದೆ, ಸುರಕ್ಷಿತ ಭಾವನೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಮವಸ್ತ್ರ ಬಳಸಬೇಕು. ಪ್ರವಾಸೋದ್ಯಮ ಕ್ಷೇತ್ರವು ದಿನೇ ದಿನೇ ಬೆಳೆಯುತ್ತಿದೆ. ಮಾರ್ಗದರ್ಶಿಗಳು ಸಹ ಕೇವಲ ಹಳೆಯ ಇತಿಹಾಸಕ್ಕೆ ಸೀಮಿತವಾಗದೆ, ಜಿಲ್ಲೆಯ ಹೊಸ ಪ್ರವಾಸಿ ತಾಣಗಳ ಬಗ್ಗೆಯೂ ನಿಖರ ಹಾಗೂ ಆಸಕ್ತಿದಾಯಕ ಮಾಹಿತಿ ಹೊಂದಿರಬೇಕು. ಈ ನಿಮ್ಮ ಆಸಕ್ತಿದಾಯಕ ಮಾರ್ಗದರ್ಶನ ಮತ್ತು ಜಿಲ್ಲೆಯ ಆತಿಥ್ಯದಿಂದ ಪ್ರಭಾವಿತರಾದ ಪ್ರವಾಸಿಗರು ಪುನಃ ಭೇಟಿ ನೀಡುವಂತಾಗಬೇಕು. ಆಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮದ ನೈಜ ಅಭಿವೃದ್ಧಿ ಸಾಧ್ಯ ಎಂದರು.