ಕಾನಹೊಸಹಳ್ಳಿಯಲ್ಲಿ ಶರಣ ತತ್ವ ಚಿಂತನೆಯ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶಸಾಪ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಉದ್ಘಾಟಿಸಿದರು. ಪ್ರಮುಖರಾದ ಡಾ.ರವೀಂದ್ರನಾಥ, ಎನ್.ಎಂ.ರವಿಕುಮಾರ್, ಪ್ರಭುದೇವ, ವಸಂತ ಸಜ್ಜನ್, ಡಾ.ವೃಷಭೇಂದ್ರಾಚಾರ್ ಇದ್ದರು. 
ವಿಜಯನಗರ

ಸಮಸಮಾಜ ನಿರ್ಮಾಣಕ್ಕೆ ಶರಣರ ತತ್ವವೇ ಆದರ್ಶ

ಪ್ರಮುಖ ಮುಖ್ಯಾಂಶಗಳು

  • ಶರಣರ
  • ಪರಂಪರೆಯಲ್ಲಿ
  • ಕೊಂಕಲ್
ಕಾನಹೊಸಹಳ್ಳಿ: ಸಕಲ ಜೀವಾತ್ಮರಿಗೆ ಲೇಸಾಗಲಿ ಎನ್ನುವಂತೆ ಮಾನವ ಧರ್ಮ ಹಾಗೂ ಸಮಸಮಾಜವನ್ನು ನಿರ್ಮಿಸಲು ಶ್ರಮಿಸಿದ 12ನೇ ಶತಮಾನದ ಶರಣರ ನಡೆ, ನುಡಿ ನಮಗೆಲ್ಲ ಆದರ್ಶವಾಗಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.
ಕೆ.ಎಂ. ವೀರೇಶ್ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಶರಣ ತತ್ವ ಚಿಂತನೆಯ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ವಾನ್ ಗುರುಸಿದ್ಧಯ್ಯನವರು ಕಲಿಸಿದ ಜ್ಞಾನ, ಸಂಸ್ಕಾರ ನಮಗೆ ಪ್ರೇರಣೆಯಾಗಿದೆ.
ಅವರದು ಅಪರೂಪದ ವ್ಯಕ್ತಿತ್ವ. ಪವಾಡ ಪುರುಷರು ಹಾಗೂ ಶರಣರ ಪರಂಪರೆಯಲ್ಲಿ ಕೊಂಕಲ್ ಸೋಮೇಶ್ವರ ಸ್ವಾಮಿಗಳು ದಾಸೋಹ, ಅಕ್ಷರ ನೀಡಿದ್ದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಕನ್ನಡ ಭಾಷೆ ಎನ್ನುವುದು ಒಬ್ಬರನ್ನು ಒಬ್ಬರು ಪ್ರೀತಿಸುವುದಾಗಿದೆ ಎಂದು ಹೇಳಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಕೆ. ರವೀಂದ್ರನಾಥ ಮಾತನಾಡಿ, ಐದನೇ ತರಗತಿ ಓದಿದ್ದ ಗ್ರಾಮೀಣ ಪ್ರದೇಶದ ಶಿಕ್ಷಕರಾಗಿದ್ದ ಕನ್ನಡ ಪಂಡಿತ ಬಿ.ಎಂ. ಗುರುಸಿದ್ಧಯ್ಯ ಅವರು ಹಳೆಗನ್ನಡದ ವಿದ್ವತ್ತನ್ನು ಹೊಂದಿದವರು. 1946ರಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ ಪಂಡಿತರು, ಶರಣ ಸಾಹಿತ್ಯವನ್ನು ಹೆಚ್ಚು ಓದಿದ್ದರು. 1953ರಲ್ಲಿ ಮದ್ರಾಸ್ ಸರ್ಕಾರ ವಿದ್ವತ್ ಪದವಿಯನ್ನು ನೀಡಿದೆ. ಶರಣಬಸವೇಶ್ವರ ಚರಿತ್ರೆ ಕಾವ್ಯವನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಬುದ್ಧ, ಬಸವ, ಪೈಗಂಬರ್, ಮಹಾವೀರ, ಅಂಬೇಡ್ಕರ್‌ರಂತಹ ಸಾಕಷ್ಟು ಮಹಾತ್ಮರು ಮಾನವರ ಉದ್ಧಾರಕ್ಕಾಗಿ ಅವತರಿಸಿ ಬಂದವರು ಎನ್ನುವುದನ್ನು ಬಿ.ಎಂ. ಗುರುಸಿದ್ಧಯ್ಯನವರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹಿರಿಯ ಸಾಹಿತಿ ಹಾಗೂ ಶಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್, ಹಿರಿಯ ವಿದ್ವಾಂಸ ಡಾ. ಎ. ವೃಷಭೇಂದ್ರಾಚಾರ್, ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿದರು. ಎಸ್.ಎಂ. ಸಂಗಮೇಶ್ವರಯ್ಯ, ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎಂ.ಬಿ. ಗುರುಮೂರ್ತಿ, ಕೆ.ಜಿ. ಕುಮಾರ ಗೌಡ, ಎಚ್.ಕೆ. ವೆಂಕಟೇಶ್ವರ ರಾವ್, ಹುಡೇಂ ಕೃಷ್ಣಮೂರ್ತಿ, ಪತ್ರಕರ್ತ ದಯಾನಂದ ಸಜ್ಜನ್, ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಸಕಲಾಪುರದಹಟ್ಟಿ ತಿಪ್ಪೀರಮ್ಮ, ಕಸಾಪ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ, ಕೆ.ಪಿ.ಎಂ. ಗಣೇಶಯ್ಯ, ಎಚ್.ಜಿ. ಪ್ರಕಾಶ್ ಗೌಡ, ನಿವೃತ್ತ ಶಿಕ್ಷಕ ಕೆಂಚಮಲ್ಲನಹಳ್ಳಿ ಶಿವಪ್ರಕಾಶ್ ಉಪಸ್ಥಿತರಿದ್ದರು.