ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಹೂವಿನಹಡಗಲಿಯಲ್ಲಿ ಶಿರಸ್ತೇದಾರ್ ಸಲಿಂ ಅವರಿಗೆ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಮನವಿ ಸಲ್ಲಿಸಲಾಯಿತು. 
ವಿಜಯನಗರ

ಶಿಕ್ಷಣ ಕ್ಷೇತ್ರ ಖಾಸಗೀಕರಣಗೊಳಿಸುವ ಹುನ್ನಾರ

ಅಶೋಕ್ ಕುಮಾರ್ ಎನ್
ಹೂವಿನಹಡಗಲಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಶಾಲೆಗಳ ವಿಲೀನ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಲಿಂ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ವಿರೂಪಾಕ್ಷ ಅಂಕ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆಗಳ ವಿಲೀನಗೊಳಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮುಂದಾಗಿದೆ. ಈ ಯೋಜನೆ ಗ್ರಾಮೀಣ ಬಡ ಮಕ್ಕಳ ಶಿಕ್ಷಣದ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯೋಜನೆಯಿಂದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸುರಕ್ಷತೆ ಮೇಲೆ ದುಷ್ಪರಿಣಾಮವಾಗಲಿದೆ. ವಿದ್ಯಾರ್ಥಿಗಳ ಗೈರು ಹಾಗೂ ಶಿಕ್ಷಣ ಮೊಟಕುಗಳಿಸುವ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಈ ಯೋಜನೆ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಹುನ್ನಾರವಾಗಿದೆ ಎಂದು ದೂರಿದರು.
ತಾಲೂಕು ಕಾರ್ಯದರ್ಶಿ ವೆಂಕಟೇಶ್ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಎಐಕೆಎಸ್ ತಾಲೂಕು ಅಧ್ಯಕ್ಷ ಮುಕುಂದಗೌಡ, ಎಐವೈಎಫ್ ತಾಲೂಕು ಸಂಚಾಲಕ ಬಸವರಾಜ ಸಂಶಿ, ಪ್ರಮುಖರಾದ ತರುಣ್, ವಿಕಾಸ, ಬಸವರಾಜ, ಹಣ್ಣಿನ ವೀರೇಶ, ಜಂಗ್ಲಿ ಸಾಬ್, ಸುಲೇಮಾನ್, ರಾಜಕುಮಾರ, ಗಿರಿ, ಪ್ರಕಾಶ ಇತರರಿದ್ದರು.