ಹಂಪಿಯಲ್ಲಿ ಶ್ರೀ ರಘುನಂದನ ತೀರ್ಥರ ವೃಂದಾವನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು.
- ಶ್ರೀರಘುನಂದನ ತೀರ್ಥರ ಮಧ್ಯಾರಾಧನೆಯಲ್ಲಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ
ಹೊಸಪೇಟೆ: ಶ್ರೀರಘುನಂದನ ತೀರ್ಥರ ಮಧ್ಯಾರಾಧನೆಯ ಪರಮ ಪವಿತ್ರ ದಿನವೂ ಶ್ರೀಮಠದ ಶಿಷ್ಯರಿಗೆ, ಭಕ್ತರಿಗೆ ಸಾರ್ಥಕತೆ, ಸೌಭಾಗ್ಯ ದಿನವಾಗಿದ್ದರೆ, ಪರಕೀಯರಿಗೆ ಕರಾಳವಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಹಂಪಿ ಶ್ರೀ ರಘುನಂದನ ತೀರ್ಥರ ಮಠದ ಮೂಲ ಬೃಂದಾವನ ಸನ್ನಿಧಿಯಲ್ಲಿ ಬುಧವಾರ ರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಶ್ರೀಮೂಲರಾಮಚಂದ್ರ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿದ್ಯಾಮಠ(ಶ್ರೀರಾಘವೇಂದ್ರ ಸ್ವಾಮಿ ಮಠ)ಕ್ಕೆ ಪರಂಪರಾಗತವಾಗಿ ಸೇರಿದ ಮೂಲ ರಾಮದೇವರನ್ನು ಮರಳಿ ಶ್ರೀಮಠಕ್ಕೆ ತಂದುಕೊಟ್ಟವರು ಶ್ರೀ ರಘುನಂದನ ತೀರ್ಥರು ಎಂದರು.
ಮೂಲರಾಮನ ಲಕ್ಷಣಗಳನ್ನು ನೋಡಿದರೆ ಇದೇ ಮೂಲ ರಾಮಚಂದ್ರದೇವರು ಎಂಬುದು ತಿಳಿಯುತ್ತೆ. ಜಗತ್ತಿನಲ್ಲಿ ಯಾರೂ, ಮೂಲರಾಮ ನಮ್ಮಲ್ಲಿದ್ದೆ ಎನ್ನುತ್ತಾರೆ, ಅವರು ಎಲ್ಲಿಯೂ ಭಕ್ತರಿಗೆ ವಿಶ್ವರೂಪ ದರ್ಶನ ಮಾಡಿಸುವ ಧೈರ್ಯ ಮಾಡಿಲ್ಲ. ಆದರೆ ಮೂಲರಾಮನು ಪರಂಪರಗತವಾಗಿ ಬಂದಿರುವ ವಿದ್ಯಾಮಠವಾದ ಶ್ರೀರಾಯರ ಮಠದಲ್ಲಿ ಭಕ್ತರಿಗೆ ನಿರಂತರವಾಗಿ ಯಾವುದೇ ಜಾತಿ, ಮತ, ಮಠ ಭೇದವಿಲ್ಲದೆ ಮೂಲರಾಮನ ವಿಶ್ವರೂಪ ದರ್ಶನ ಲಭಿಸುತ್ತಿದೆ. ಚರ್ತುಯುಗ ಚರ್ತುಮುಖ ಬ್ರಹ್ಮದೇವರು ಕರಾರ್ಚಿತ ಶ್ರೀಮೂಲರಾಮದೇವರು ಚರ್ತುವಿಧ ಪುರುಷಾರ್ಥ ನೀಡುತ್ತಾನೆ. ಅಂತಹ ಮೂಲರಾಮಚಂದ್ರ ದೇವರು ಶ್ರೀಮಠದಲ್ಲಿದೆ. ಜಗತ್ತಿನಲ್ಲಿ ಇರೋದುಂದೆ ಮೂಲರಾಮ. ಪರಮಪವಿತ್ರ ಪುಣ್ಯಭೂಮಿಯಾದ ಹಂಪಿ ನೆಲೆಯಲ್ಲಿ ಯತಿಗಳು, ಹರಿದಾಸರು ಓಡಾಡಿದ್ದಾರೆ ಎಂದರು.
ಶ್ರೀಗಳು ಶ್ರೀಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ನೆರೆದ ಭಕ್ತರಿಗೆ ದರ್ಶನ ಮಾಡಿಸಿದರು. ಬಳಿಕ ನೈವೇದ್ಯ, ಹಸ್ತೋದಕ ನೆರವೇರಿಸಿ ಮಹಾಮಂಗಳಾರತಿ ಮಾಡಿದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ, ಜಿಲ್ಲಾ ಸಂಚಾಲಕ ಅನಂತ ಪದ್ಮನಾಭ, ಮಠದ ಪಂಡಿತರಾದ ಶಮಾಚಾರ್ಯ, ದ್ವಾರಕನಾಥ ಆಚಾರ್ಯ, ವೇಣುಗೋಪಾಲ ಆಚಾರ್ಯ, ಶ್ರೀಗಳ ಆಪ್ತ ಸಹಾಯಕ ಪ್ರಕಾಶ್, ಮಠಾಧಿಕಾರಿಗಳಾದ ಭೀಮಸೇನಾಚಾರ್ಯ, ಪವನಾಚಾರ್ಯ, ವಿಚಾರಣಕರ್ತ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕರಾದ ಸುಮಂತ್ ಕುಲಕರ್ಣಿ, ಟೀಕಾಚಾರ್ಯ, ಪ್ರಮುಖರಾದ ಹತ್ತಿಬೆಳಗಲ್ ಗುರುರಾಜ್ ಆಚಾರ್ಯ, ಸುಧೀಂದ್ರಾಚಾರ್ಯ ಇತರರಿದ್ದರು.