ಹೊಸಪೇಟೆ ಅನಂತಶಯನಗುಡಿ ರಾಯಣ್ಣ ಕಾಲೋನಿಯಲ್ಲಿ ಬುಧವಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಉದ್ಘಾಟಿಸಿದರು. ಎಎಸ್ಪಿ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಉಪನ್ಯಾಸಕ ಪ್ರೊ. ಡಾ.ಟಿ.ಎಚ್.ಬಸವರಾಜ್ ಇತರರಿದ್ದರು. 
ವಿಜಯನಗರ

ಹಡಪದ ಅಪ್ಪಣ್ಣನವರ ವೈಚಾರಿಕ ಚಿಂತನೆ ಪ್ರಸ್ತುತ

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಅಭಿಪ್ರಾಯ
ಹೊಸಪೇಟೆ: ರಕ್ತ ಕ್ರಾಂತಿಯ ಬದಲು ವೈಚಾರಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶಗಳು ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದ್ದಾರೆ.
ನಗರದ ಅನಂತಶಯನಗುಡಿ ರಾಯಣ್ಣ ಕಾಲೋನಿಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅನುಭವ ಮಂಟಪದಲ್ಲಿ ಬಸವಣ್ಣನವರ ಜತೆಗೂಡಿ ಕಾರ್ಯನಿರ್ವಹಿಸಿದ ಅಪ್ಪಣ್ಣನವರು, ಅಂದಿನ ಕಾಲದ ಮೌಢ್ಯತೆ, ಅಂಧಶ್ರದ್ಧೆ ಹಾಗೂ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರು. ಶಸ್ತ್ರಾಸ್ತ್ರಗಳ ಬದಲು ಆಲೋಚನೆ ಮತ್ತು ವಿಚಾರಗಳ ಮೂಲಕ ವೈಚಾರಿಕ ಕ್ರಾಂತಿ ಹುಟ್ಟುಹಾಕಿದ ಅವರು, ಸರ್ವರಿಗೂ ಸಮಬಾಳು-ಸಮಪಾಲು ಎಂಬ ತತ್ವವನ್ನು ಸಾರಿದರು. ಇಂದಿನ ಆಧುನಿಕ ಕಾಲದಲ್ಲೂ ಸಮಾಜದಲ್ಲಿ ಅಸಮಾನತೆ ಜೀವಂತವಾಗಿದ್ದು, ಇದನ್ನು ತೊಡೆದುಹಾಕಲು ಅಪ್ಪಣ್ಣನವರ ವಚನಗಳು ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.