- ಬಿಡದಿ-ಹಾರೋಹಳ್ಳಿ ರೈತರ ಪರ ಜೆಡಿಎಸ್ ವಿಜಯನಗರ ಜಿಲ್ಲಾ ಅಧ್ಯಕ್ಷ ಮೃತ್ಯುಂಜಯ ಬಾದಾಮಿ ಆಗ್ರಹ
ಹೊಸಪೇಟೆ: ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ 498.34 ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವ ಸರ್ಕಾರದ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕು ಎಂದು ಜೆಡಿಎಸ್ ವಿಜಯನಗರ ಜಿಲ್ಲಾ ಅಧ್ಯಕ್ಷ ಮೃತ್ಯುಂಜಯ ಬಾದಾಮಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈ ಯೋಜನೆಯಿಂದ 755 ಬಡ ರೈತ ಕುಟುಂಬಗಳು ಬೀದಿಗೆ ಬೀಳುತ್ತಿದ್ದು, ಇದರಲ್ಲಿ ಶೇ. 81 ಕ್ಕೂ ಹೆಚ್ಚು ಅತಿ ಸಣ್ಣ ಕೃಷಿಕರಾಗಿದ್ದಾರೆ. ಮುಂದಿನ ತಿಂಗಳು 7,500ಕ್ಕೂ ಹೆಚ್ಚು ಎಕರೆ ಭೂಸ್ವಾಧೀನ ವಿಸ್ತರಿಸಲು ಸರ್ಕಾರ ಕರಾಳ ಸಂಚು ರೂಪಿಸಿದೆ. ಇದರಿಂದಾಗಿ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ 6 ಲಕ್ಷ ಲೀಟರ್ ಹಾಲು, ರೇಷ್ಮೆ ಮತ್ತು ತೋಟಗಾರಿಕೆ ಉದ್ಯಮ ಸಂಪೂರ್ಣ ನಾಶವಾಗಲಿದೆ. ಹಣಕಾಸು ಇಲಾಖೆಯ ತೀವ್ರ ವಿರೋಧದ ನಡುವೆಯೂ 33,562 ಕೋಟಿ ರೂ. ಮೌಲ್ಯದ ಈ ರಿಯಲ್ ಎಸ್ಟೇಟ್ ದಂಧೆಗಾಗಿ ಸಾರ್ವಜನಿಕ ಆಸ್ತಿಗಳನ್ನು 3,650 ಕೋಟಿ ರೂ.ಗೆ ಹುಡ್ಕೊ ಬ್ಯಾಂಕಿನಲ್ಲಿ ಅಡಮಾನ ಇಡಲಾಗಿದೆ. ಅಲ್ಲದೆ, ಸ್ಮಾರ್ಟ್ ಸಿಟಿ ಹೆಸರಿನಲ್ಲಿ 10 ಲಕ್ಷ ಹಸಿರು ಮರಗಳ ಪರಿಸರ ಮಾರಣಹೋಮಕ್ಕೆ ಮುಂದಾಗಿದೆ. ಈ ಕೂಡಲೇ ಅಲ್ಲಿನ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಇನ್ನು ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದರು.