ಹೊಸಪೇಟೆಯ ಆರ್ ಬಿಎಸ್ ಎಸ್ ಎನ್ ಕಂಪನಿ ಮುಂದೆ ಸ್ಥಳೀಯ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ. ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ಬಿ.ಜೀವರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಸರವಣ್, ನಗರಸಭೆ ಸದಸ್ಯರಾದ ಜಿ.ಎಸ್.ಹನುಮಂತಪ್ಪ, ತಾರಿಹಳ್ಳಿ ಜಂಬುನಾಥ, ಪ್ರಮುಖರಾದ ಸಿ.ಅರ್.ಭರತ್, ದ್ವಾರಕೀಶ್ ಇತರರಿದ್ದರು.
- ಮಾಜಿ ಸಚಿವ ಆನಂದ್ ಸಿಂಗ್ ಆಗ್ರಹ
- ಆರ್ ಬಿಎಸ್ಎಸ್ಎನ್ ವಿರುದ್ಧ ಜನಾಕ್ರೋಶ
ಹೊಸಪೇಟೆ: ನಗರದ ಕಾರಿಗನೂರಿನಲ್ಲಿರುವ ಖಾಸಗಿ ಗಣಿಗಾರಿಕೆ ಸಂಸ್ಥೆ ಆರ್ ಬಿಎಸ್ ಎಸ್ ಎನ್ ವಿರುದ್ಧ ಸ್ಥಳೀಯ ಕೂಲಿ ಕಾರ್ಮಿಕರು ರೊಚ್ಚಿಗೆದ್ದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಾರಿಗನೂರು ಕ್ಯಾಂಪ್‌ನ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ಕಂಪನಿ ನೋಟಿಸ್ ನೀಡಿದ್ದೇ ಈ ಜನಾಕ್ರೋಶಕ್ಕೆ ನೇರ ಕಾರಣವಾಗಿದೆ.
ನಗರದ ಕಾರಿಗನೂರಿನಲ್ಲಿರುವ ಖಾಸಗಿ ಒಡೆತನದ ಆರ್ ಬಿಎಸ್ಎಸ್ಎನ್ ಮೈನಿಂಗ್ ಕಂಪನಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆಗಿಳಿದಿದ್ದಾರೆ. ಕಂಪನಿಯ ಗೇಟ್ ಮುಂದೆ ಜಮಾಯಿಸಿದ ನೂರಾರು ನಿವಾಸಿಗಳು ಮತ್ತು ಕೂಲಿ ಕಾರ್ಮಿಕರು ಧರಣಿ ನಡೆಸಿ ಕಂಪನಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೈನಿಂಗ್ ಕಂಪನಿಯು ಸ್ಥಳೀಯ ಕಾರಿಗನೂರ ಕ್ಯಾಂಪ್‌ನ ಬಡ ಕೂಲಿ ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿರುವುದು ಜನರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರಿ ಒಡೆತನದ ಜಾಗದಲ್ಲಿ ವಾಸಿಸುತ್ತಿರುವ ಜನರಿಗೆ ನೋಟಿಸ್ ನೀಡಲು ಕಂಪನಿಗೆ ಯಾವುದೇ ಅಧಿಕಾರವಿಲ್ಲ ಎಂದು ನಿವಾಸಿಗಳು ಕಿಡಿಕಾರಿದ್ದಾರೆ. ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಆನಂದ್ ಸಿಂಗ್, ಪ್ರತಿಭಟನಾಕಾರರಿಗೆ ಸಂಪೂರ್ಣ ಬೆಂಬಲ ಘೋಷಿಸಿ ಸ್ಥಳದಲ್ಲೇ ಕಂಪನಿಯ ಹಿರಿಯ ಅಧಿಕಾರಿಗಳನ್ನು ಕರೆಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ವಿರುದ್ಧ ಗುಡುಗಿದ ಆನಂದ್ ಸಿಂಗ್, ನಗರಸಭೆ ವ್ಯಾಪ್ತಿಗೆ ಬರುವ 30 ಎಕರೆ ಸೇರಿದಂತೆ ಒಟ್ಟು 80 ಎಕರೆ ಜಾಗವನ್ನು ಗುತ್ತಿಗೆಗೆ ಪಡೆದು ಕಳೆದ 30 ವರ್ಷಗಳಿಂದ ಮೈನಿಂಗ್ ಮಾಡಿದ್ದೀರಿ. ಈಗ ಲೀಸ್ ಅವಧಿ ಮುಗಿದು ಮೂರು ತಿಂಗಳಾದರೂ ಕೆಲಸ ಹೇಗೆ ಮುಂದುವರಿಸಿದ್ದೀರಿ? ನವೀಕರಣವಾಗದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಎಂದು ನೇರವಾಗಿ ಪ್ರಶ್ನಿಸಿದರು. ಸರ್ಕಾರದ ಜಾಗದಲ್ಲಿರುವ ಕಾರ್ಮಿಕರ ಮನೆಗಳನ್ನು ಖಾಲಿ ಮಾಡಿಸಲು ನೋಟಿಸ್ ನೀಡುವ ಯಾವುದೇ ಹಕ್ಕು ನಿಮಗಿಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಗೋದಾಮುಗಳಿಗೆ ಚದರಡಿಗೆ 40 ರಿಂದ 50 ರೂಪಾಯಿ ಬಾಡಿಗೆ ನಿಗದಿಯಾಗುತ್ತದೆ. ಆದರೆ ಈ ಕಂಪನಿ ಕೇವಲ 2.29 ರೂಪಾಯಿಯ ಅತ್ಯಲ್ಪ ದರದಲ್ಲಿ ಲೀಸ್ ನವೀಕರಣಕ್ಕೆ ಯತ್ನಿಸುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 5 ಸಾವಿರ ಕೋಟಿ ರೂ. ನಷ್ಟ ಹಾಗೂ ಲೂಟಿಯಾಗಲಿದೆ. ಈ ವಿಚಾರವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಈ ಕಂಪನಿಯನ್ನು ಖಾಲಿ ಮಾಡಿಸಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ನವೀಕರಣ ಮಾಡಬಾರದು ಎಂದು ಒತ್ತಾಯಿಸಿದ ಅವರು, ಕಂಪನಿಯವರು ಲೀಸ್ ನವೀಕರಣಕ್ಕೆ ಈ ಹಿಂದೆ ನನ್ನ ಬಳಿಯೂ ಬಂದಿದ್ದರು, ಆದರೆ ನಾನು ಇರುವವರೆಗೂ ಇದಕ್ಕೆ ಅವಕಾಶ ನೀಡುವುದಿಲ್ಲ. ಕೊಪ್ಪಳದಲ್ಲಿ ಬಲ್ಡೋಟಾ ಸಂಸ್ಥೆಯಿಂದ ಪರಿಸರ ಹಾಳಾಗಿರುವಂತೆ ನಮ್ಮ ಹೊಸಪೇಟೆಯ ಪರಿಸರ ಹಾಳಾಗಲು ಬಿಡುವುದಿಲ್ಲ. ನಮ್ಮ ಜನರ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಆಗ್ರಹಿಸಿದರು.