ಕೂಡ್ಲಿಗಿ ತಾಲೂಕಿನ ಶ್ರೀಕಂಠಪುರ ತಾಂಡಾದಲ್ಲಿ ಮಂಡ್ಯಕಡೆ ಲಾರಿಯಲ್ಲಿ ಕಬ್ಬು ಕಟಾವುಗೆ ಹೊರಟ ಜನರು.
- ಗುಳೆಯ ಹಾದಿಯಲ್ಲಿ ಬದುಕು
- ಹಸಿವಿನ ಬೇಗೆಗೆ ಹುಟ್ಟೂರು ತೊರೆಯುತ್ತಿರುವ ತಾಂಡಾಗಳ ಜನರು!
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸರಿ, ಹುಟ್ಟಿದ ಮಣ್ಣಿನಲ್ಲೇ ಇರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ, ವಿಧಿಯಾಟ ಮತ್ತು ಹಸಿವಿನ ಆರ್ಭಟದ ಮುಂದೆ ಆ ಆಸೆಗಳು ಕಮರಿ ಹೋಗುತ್ತಿವೆ. ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ತಾಂಡಾಗಳಲ್ಲಿ ಕಂಡುಬರುತ್ತಿರುವ ದೃಶ್ಯಗಳು ಎಂಥವರ ಕಣ್ಣನ್ನೂ ತೇವಗೊಳಿಸುತ್ತಿವೆ.
ತುತ್ತಿನ ಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆ, ನೂರಾರು ಕುಟುಂಬಗಳನ್ನು ತಮ್ಮೂರಿನಿಂದ ನೂರಾರು ಮೈಲಿ ದೂರದ ಅಜ್ಞಾತ ಹಾದಿಗೆ ದೂಡಿದೆ. ತಾಂಡಾಗಳಲ್ಲಿ ಈಗ ಮೌನ ಆವರಿಸಿದೆ. ಆದರೆ, ಈ ಮೌನದ ಹಿಂದೆ ವಲಸೆಯ ನೋವು ಅಡಗಿದೆ. ಇಲ್ಲಿನ ಜನರು ಕೇವಲ ಪ್ರಯಾಣ ಬೆಳೆಸುತ್ತಿಲ್ಲ, ಬದಲಾಗಿ ತಮ್ಮ ಇಡೀ ಬದುಕನ್ನೇ ಒಂದೆಡೆಗೆ ಶಿಫ್ಟ್ ಮಾಡುತ್ತಿದ್ದಾರೆ.
ದೈನಂದಿನ ಜೀವನಕ್ಕೆ ಬೇಕಾದ ಅಡುಗೆ ಪಾತ್ರೆಗಳು, ನೀರಿನ ಬಿಂದಿಗೆಗಳು, ಬೆಡ್-ಬೆಡ್‌ಶೀಟ್ ಹೀಗೆ ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲ ಮೂಟೆ ಕಟ್ಟಿ, ಹೆಗಲಿಗೇರಿಸಿಕೊಂಡು ಕೂಲಿ ಕೆಲಸದ ಹುಡುಕಾಟದಲ್ಲಿ ಹೊರಟಿದ್ದಾರೆ. ಮುಂದಿನ ಆರುರಿಂದ ಎಂಟು ತಿಂಗಳ ಕಾಲ ಇವರಿಗೆ ಸ್ವಂತ ಸೂರು ಇಲ್ಲ, ನೆಲೆ ಇಲ್ಲ. ಮೈಸೂರು, ಮಂಡ್ಯ ಜಿಲ್ಲೆಗಳ ಕಬ್ಬಿನ ಗದ್ದೆಗಳೇ ಇವರಿಗೆ ಜೀವನದ ಆಸರೆ.
ಕಮರುತ್ತಿರುವ ಸಂಬಂಧಗಳು
ಈ ವಲಸೆಯ ದುರಂತ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ಇಡೀ ಕುಟುಂಬವನ್ನೇ ಹೊತ್ತೊಯ್ಯಲು ಸಾಧ್ಯವಾಗದ ಅನಿವಾರ್ಯತೆಯಲ್ಲಿ, ಗಟ್ಟಿಮುಟ್ಟಾದ ಕೈಗಳೆಲ್ಲ ಊರು ಬಿಡುತ್ತಿವೆ. ತಮ್ಮನ್ನು ನೋಡಿಕೊಳ್ಳಬೇಕಿದ್ದ ಮಕ್ಕಳು ದೂರದ ಊರಿಗೆ ಹೋದ ಮೇಲೆ, ಮನೆಯಲ್ಲಿ ಉಳಿದ ವೃದ್ಧರ ಸ್ಥಿತಿ ಅಯೋಮಯವಾಗಿದೆ. ಶಿಕ್ಷಣದ ಅಕ್ಷರ ಕಲಿಯಬೇಕಾದ ಪುಟ್ಟ ಮಕ್ಕಳು, ಪೋಷಕರ ಜತೆ ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಅಥವಾ ಶಾಲೆ ಬಿಟ್ಟು ಊರಲ್ಲೇ ಉಳಿಯುವ ಪರಿಸ್ಥಿತಿ ಉದ್ಭವಿಸಿದೆ. ಬದುಕಿನ ಈ ಹೋರಾಟದಲ್ಲಿ ಕೌಟುಂಬಿಕ ಸಂಬAಧಗಳು, ಮಕ್ಕಳ ಭವಿಷ್ಯ ಎಲ್ಲವೂ ಬಲಿಯಾಗುತ್ತಿವೆ.
ವ್ಯವಸ್ಥೆಯ ಮೌನವೇಕೆ?
ಉತ್ತರ ಕರ್ನಾಟಕ ಭಾಗದಲ್ಲಿ 'ಗುಳೆ ಹೋಗುವುದು' ಹೊಸದೇನಲ್ಲ. ದಶಕಗಳಿಂದ ಈ ಸಮಸ್ಯೆ ಮುಂದುವರಿಯುತ್ತಲೇ ಇದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗದಿರುವುದು ಮತ್ತು ಮಳೆ ಆಶ್ರಿತ ಕೃಷಿ ಕೈಕೊಡುವುದೇ ಈ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹಸಿವಿನ ಜ್ವಾಲೆ ಇವರನ್ನು ಪ್ರತೀ ವರ್ಷ ಊರೂರು ಅಲೆಯುವಂತೆ ಮಾಡುತ್ತಿದ್ದರೂ, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿವೆ ಎನ್ನುವುದು ಸಾರ್ವಜನಿಕರ ಆರೋಪ. ತಾಂಡಾ ಜನರ ಈ ಕಣ್ಣೀರಿಗೆ ಕೊನೆಯೆಂದು? ಇವರ ಗೋಳನ್ನು ಕೇಳುವವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದಾಗಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರಗಳು, ಇಂತಹ ಬಡ ಕುಟುಂಬಗಳ ಪಾಲಿಗೆ ಒಂದು ಭರವಸೆಯ ಬೆಳಕಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇಲ್ಲಿ ಕುಟುಂಬ ನಿರ್ವಹಣೆಗೆ ಉದ್ಯೋಗ ಇಲ್ಲ. ಇಲ್ಲಿ ನಮ್ಮ ಮಳೆ ಆಶ್ರಿತ ಜಮೀನುಗಳು ಹೆಚ್ಚಿವ. ಆದ್ದರಿಂದ ಮೈಸೂರು, ಮಂಡ್ಯ ಕಡೆ ದುಡಿಯಲು ಹೋಗುತ್ತೇವೆ. ಬಡತನ ಯಾರಿಗೂ ಬಿಡಲ್ಲ.
— ಗಣಿಯಾ ನಾಯ್ಕ, ಗುಳೆ ಹೊಟವರು, ಕಮಲಾಪುರ