ಕಾನಹೊಸಹಳ್ಳಿ ಸಮೀಪ ಟಿ.ಕಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಭಿಮನ್ಯು ಕಾಳಗ ಬಯಲಾಟದ ದೃಶ್ಯ.
ಕಾನಹೊಸಹಳ್ಳಿ: ಎಲೈ ಸಾರಥಿ ಎಂಬ ಮಾತುಗಳ ಅಬ್ಬರ, ಸನ್ನಿವೇಶಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡ ಸ್ತ್ರೀ ಪಾತ್ರಧಾರಿ ಪುರುಷ ಕಲಾವಿದರು, ರಂಗಸಜ್ಜಿಕೆಯಲ್ಲಿ ತಾಳ, ಮದ್ದಳೆಗಳ ಥಕ ಧಿಮಿತದ ಝೇಂಕಾರ, ಪ್ರತಿ ಪಾತ್ರದ ಸನ್ನಿವೇಶದಲ್ಲೂ ಭಾಗವತರ ಹಾಡಿನ ಸಾಲಿನ ಅರ್ಥವಂತಿಕೆ. ಟಿ.ಕಲ್ಲಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳು ಇವು.
ಬಾಲಗೋಪಾಲ ಪಾತ್ರಧಾರಿ ಜಿ.ರಂಗನಾಥ ಪ್ರವೇಶದಿಂದ ಆರಂಭಗೊಂಡ ಬಯಲಾಟ, ಕೃಷ್ಣ, ಧರ್ಮರಾಯ, ಭೀಮ, ಅರ್ಜುನ, ಅಭಿಮನ್ಯು, ಸೈಂಧವ, ಕರ್ಣ, ದ್ರೋಣಾಚಾರ್ಯ, ಕೌರವ ಪಾತ್ರಧಾರಿಗಳು ಮಹಾಭಾರತ ಸನ್ನಿವೇಶದ ಕತೆಯನ್ನು ಕಣ್ಣೆದುರು ತಂದಂತೆ ಅಭಿನಯಿಸಿದರು.
ಹೆಸರಾಂತ ಕಲಾವಿದ ಹರೀಶ್ ಜಿಂಕೆ ಅವರು ದ್ರೌಪದಿ ಪಾತ್ರ ಇಡೀ ನಾಟಕದ ಮೆರುಗನ್ನು ಹೆಚ್ಚಿಸಿತು. ಸುಭದ್ರೆ, ಕನಕಾಂಗಿ ಪಾತ್ರಗಳನ್ನು ನಿರ್ವಹಿಸಿದ ಪುರುಷ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು. ಬಯಲಾಟದ ಭಾಗವತರಾಗಿ ಓಬಯ್ಯನಹಟ್ಟಿ ಜಯಪ್ಪ, ಕಲ್ಲಹಳ್ಳಿ ನುಂಕಪ್ಪ, ಸುಂಕಜ್ಜರ ಮಂಜಣ್ಣ, ಬಡಿಗೇರ ನಾಗರಾಜ, ಚಿನ್ನೋಬನಹಳ್ಳಿ ಮಹಾಂತೇಶ್ ಸೇರಿದಂತೆ ಇತರ ಕಲಾವಿದರು ಪೌರಾಣಿಕ ನಾಟಕದ ಸಾರವನ್ನು ಹಂಚಿದರು.
ತೊರೆಕೋಲಮ್ಮನಹಳ್ಳಿ ಕಣದಾಗಳ ತಿಪ್ಪೇಸ್ವಾಮಿ ಅವರು ಸಾರಥಿಯಾಗಿ ಬಯಲಾಟವನ್ನು ಮುನ್ನಡೆಸಿದರು. ಪಾತ್ರಧಾರಿಗಳನ್ನು ರಂಗ ಸಜ್ಜಿಕೆಗೆ ಕರೆತರುವುದಕ್ಕೆ ಬಳಸಿದ ಹಲಗೆ ವಾದನದ ಸದ್ದು ಬಯಲಾಟ ನೋಡಲು ಬಂದವರನ್ನು ಹೆಜ್ಜೆ ಹಾಕಿಸಿತು. ರಾತ್ರಿ 10 ಗಂಟೆಗೆ ಶುರುವಾದ ಅಭಿಮನ್ಯು ಕಾಳಗ ಬಯಲಾಟ ಬೆಳಗಿನ ಜಾವ 5 ಗಂಟೆಯವರೆಗೆ ನಡೆಯಿತು.
ಬಯಲಾಟ ನೋಡಲು ಹತ್ತಾರು ಹಳ್ಳಿಗಳ ಸಾವಿರಾರು ಜನರು ಆಗಮಿಸಿದ್ದರು. ಯಕ್ಷಗಾನಕ್ಕೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಯಲಾಟ ನೋಡಲೆಂದು ಕಲಾವಿದರಾದ ಬಾಲಕೃಷ್ಣ ಮಿಥುನ್, ಕಾರ್ತಿಕ್ ಎಸ್.ಕರಗಲ್, ಮಂಜುನಾಥ ಗಾಣಿಗ ಆಗಮಿಸಿದ್ದು ವಿಶೇಷವಾಗಿತ್ತು.