- ಪೊಲೀಸ್ ಪರಿಶೀಲನೆ ಇಲ್ಲದೆ ನೇಮಕ
- ಉತ್ತಮ-ಕೆಟ್ಟ ಸ್ಪರ್ಶದ ಅರಿವು ನೀಡದ ಶಾಲೆ
- ಎಸ್‌ಡಿಎಂಸಿ ಸಭೆಗಳು ಸ್ಥಗಿತ, ನಿಯಮ ಉಲ್ಲಂಘನೆ
ಕಂಪ್ಲಿ : ವಿದ್ಯೆ ಕಲಿಸಬೇಕಾದ ಶಾಲಾವರಣದಲ್ಲೇ ಅತಿಥಿ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಎಸಗಿದ ಅತ್ಯಾಚಾರದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಫೆ.16ರಂದು ನಡೆದ ಈ ಲೈಂಗಿಕ ದೌರ್ಜನ್ಯದ ಕೃತ್ಯ ಪಾಲಕರ ಪ್ರತಿಭಟನೆ ನಂತರವಷ್ಟೇ ಬೆಳಕಿಗೆ ಬಂದಿದ್ದು, ಈ ಭೀಕರ ಘಟನೆಯನ್ನು ಶಿಕ್ಷಕರು ಮುಚ್ಚಿಡಲು ಯತ್ನಿಸಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಗೆ ಭೇಟಿ ನೀಡಿದ ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಡೆಸಿದ ತನಿಖೆಯಲ್ಲಿ ಶಾಲಾ ಆಡಳಿತದ ಸರಣಿ ವೈಫಲ್ಯಗಳು ಹೊರಬಂದಿವೆ.
ಶಾಲೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಅತ್ಯಂತ ಕಳವಳಕಾರಿ ಅಂಶಗಳು ಪತ್ತೆಯಾಗಿವೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದ ಸಿಬ್ಬಂದಿಯಿಂದ ಮಕ್ಕಳ ಮೇಲೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ನಡೆಯುತ್ತಿದ್ದವು ಎಂಬ ದೂರುಗಳು ಕೇಳಿಬಂದಿವೆ.
ಮಕ್ಕಳಿಗೆ ಕನಿಷ್ಠ ಪಕ್ಷ ‘ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ದ ಅರಿವು ಮೂಡಿಸುವಲ್ಲಿ ಶಾಲಾ ಮಂಡಳಿ ಸಂಪೂರ್ಣ ಸೋತಿದೆ. ಅತ್ಯಾಚಾರದಂತಹ ಗಂಭೀರ ಘಟನೆ ನಡೆದಾಗ ಮಕ್ಕಳು ಧೈರ್ಯ ಮಾಡಿ ಶಿಕ್ಷಕಿಯರ ಗಮನಕ್ಕೆ ತಂದರೂ, ಅವರು ಅದನ್ನು ನಿರ್ಲಕ್ಷಿಸಿರುವುದು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳ ಸಮಸ್ಯೆ ಆಲಿಸಲು ಒಂದು ದೂರು ಪೆಟ್ಟಿಗೆಯೂ ಇಲ್ಲದಿರುವುದು ಆಡಳಿತದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಕಳೆದ 2025ರ ಆಗಸ್ಟ್‌ನಿಂದ ಶಾಲೆಯಲ್ಲಿ ಎಸ್‌ಡಿಎಂಸಿ ಸಭೆಗಳನ್ನೇ ನಡೆಸಿಲ್ಲ ಹಾಗೂ ಮಕ್ಕಳ ರಕ್ಷಣಾ ನೀತಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಮುಖ್ಯಶಿಕ್ಷಕರ ಗೈರುಹಾಜರಿಯಿಂದಾಗಿ ಶಾಲಾ ಪರಿಸರ ಸಂಪೂರ್ಣ ಹದಗೆಟ್ಟಿದ್ದು, ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಮತ್ತು ನಡತೆಯ ಬಗ್ಗೆ ಯಾವುದೇ ಪೊಲೀಸ್ ಪರಿಶೀಲನೆ ನಡೆಸಿಲ್ಲ. ಅತಿಥಿ ಶಿಕ್ಷಕರ ಪೂರ್ವ ಇತಿಹಾಸ, ನಡತೆ ಸರಿಯಿಲ್ಲದ ಮಾಹಿತಿ ತಿಳಿದಿದ್ದರೂ ನೇಮಕ ಮಾಡಿಕೊಂಡಿಗು ಬಯಲಾಗಿದೆ ಘಟನೆಯ ಭಯದಿಂದ ಶಾಲೆಯ ಹಾಜರಾತಿ ಅರ್ಧಕ್ಕಿಂತಲೂ ಕಡಿಮೆಯಾಗಿದ್ದು, ಮಕ್ಕಳ ಸುರಕ್ಷತೆ ಇಲ್ಲಿ ಪ್ರಶ್ನಾರ್ಹವಾಗಿದೆ. ಈ ಇಡೀ ಪ್ರಕರಣದ ಬಗ್ಗೆ ತಳಮಟ್ಟದ ಸಮಗ್ರ ತನಿಖೆ ನಡೆಸಿ ಸಂಪೂರ್ಣ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಮಾಹಿತಿ ನೀಡಿದರು.
ಸಮಾಲೋಚನೆ ಸಂದರ್ಭ ಜಿಲ್ಲಾ ಮಕ್ಕಳ ರಕ್ಷಣ
ಘಟಕದ ಆಪ್ತ ಸಮಾಲೋಚಕಿ ಸುಧಾ, ಮಕ್ಕಳ ಸಹಾಯವಾಣಿ ಸಂಯೋಜಕ ಕೆ.ಆನಂದ್, ಸಿಬ್ಬಂದಿ ರವಿಕುಮಾರ್, ಅಕ್ಕ ಪಡೆಯ ಸದಸ್ಯರಾದ ರಮ್ಯಾ, ಗಿರಿಜಾ, ಶರಾವತಿ, ಇಸಿಒಗಳಾದ ಎಂ.ರೇವಣ್ಣ, ಟಿ.ಎಂ.ಬಸವರಾಜ, ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು.
ಶಾಲೆಯಲ್ಲಿ ನಡೆದ ಕೃತ್ಯಗಳ ಕುರಿತು ಆಪ್ತ ಸಮಾಲೋಚನೆಯಲ್ಲಿ ಮಕ್ಕಳು ಮಾಹಿತಿ ಹಂಚಿಕೊಂಡಿದ್ದಾರೆ. ಮಕ್ಕಳಲ್ಲಿ ಧೈರ್ಯ ತುಂಬಿ, ಮಕ್ಕಳ ಸಹಾಯವಾಣಿ ಸಂಖ್ಯೆ, ವೈಯಕ್ತಿಕ ದೂರವಾಣಿ ಸಂಖ್ಯೆ ನೀಡಿದೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರನ್ನು ಶಾಲೆಗೆ ಕರೆತಂದು ಮಕ್ಕಳೊಂದಿಗೆ ವಿಶೇಷ ಸಮಾಲೋಚನೆ ಸಭೆ ನಡೆಸಲಾಗುವುದು.
ಚನ್ನಬಸಪ್ಪ ಪಾಟೀಲ್ ಮಕ್ಕಳ ರಕ್ಷಣಾಧಿಕಾರಿ, ಬಳ್ಳಾರಿ