ಉಮಾದೇವಿ 
ವಿಜಯನಗರ

ಶಿಕ್ಷಕರ ನೇಮಕಾತಿ ಸರ್ಕಾರಿ ಶಾಲೆಗಳಿಗೆ ಕಡೆಗಣನೆ

ಹೊಸಪೇಟೆ: ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕಾಗಿ ಘೋಷಿಸಲಾಗಿರುವ 2,500 ಐಟಿ ಶಿಕ್ಷಕರ ನೇಮಕಾತಿ ಹಾಗೂ ಇತ್ತೀಚಿನ 11 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್) ಮಾತ್ರ ಆದ್ಯತೆ ನೀಡುತ್ತಿರುವುದನ್ನು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಉಮಾದೇವಿ ವಿರೋಧಿಸಿದ್ದಾರೆ.
ವರ್ಗಾವಣೆ ಸೇರಿದಂತೆ ಸರ್ಕಾರದ ಎಲ್ಲಾ ಸೌಕರ್ಯಗಳನ್ನು ಕೇವಲ ಕೆಪಿಎಸ್ ಶಾಲೆಗಳಿಗೆ ಸೀಮಿತಗೊಳಿಸುವ ಮೂಲಕ, ದಶಕಗಳಿಂದ ಗ್ರಾಮೀಣ ಬಡ ಮಕ್ಕಳಿಗೆ ಆಸರೆಯಾಗಿದ್ದ ಹಳ್ಳಿಯ ಸರ್ಕಾರಿ ಶಾಲೆಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಇದು ಹಳ್ಳಿಯ ಶಾಲೆಗಳಿಗೆ ಸೌಲಭ್ಯ ನಿರಾಕರಿಸಿ, ಅವುಗಳನ್ನು ಪರೋಕ್ಷವಾಗಿ ಮುಚ್ಚುವ ಕುತಂತ್ರ ಎಂದು ಸಮಿತಿ ಟೀಕಿಸಿದೆ.
ರಾಜ್ಯದಲ್ಲಿ ಸದ್ಯ 7 ಸಾವಿರ ಏಕೋಪಾಧ್ಯಾಯ ಶಾಲೆಗಳಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳು ತೀವ್ರ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಸರ್ಕಾರ ಕೂಡಲೇ ಇಂತಹ ಶಾಲೆಗಳಿಗೆ ಆದ್ಯತೆ ಮೇರೆಗೆ ಶಿಕ್ಷಕರನ್ನು ಒದಗಿಸಬೇಕು. ಗ್ರಾಮೀಣ ಶಾಲೆಗಳ ರಕ್ಷಣೆಗಾಗಿ ಸಾರ್ವಜನಿಕರು ನಮ್ಮೂರ ಶಾಲೆ ಉಳಿಸಿ ಹೋರಾಟವನ್ನು ತೀವ್ರಗೊಳಿಸಬೇಕೆಂದು ಕರೆ ನೀಡಿದ್ದಾರೆ.