ತುಂಗಭದ್ರಾ ಜಲಾಶಯದಲ್ಲಿ 24ನೇ ಗೇಟ್ ತೆರವು ಕಾರ್ಯ ನಡೆಯುತ್ತಿರುವುದು.
- 24ನೇ ಪೂರ್ಣ, 27ನೇ ಗೇಟ್ ನಾಳೆ ಆರಂಭ
- ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವ ಕಾರ್ಯ
ಹೊಸಪೇಟೆ : ತುಂಗಭದ್ರಾ ಜಲಾಶಯದ 24ನೇ ಗೇಟ್ ತೆರವು ಕಾರ್ಯ ಶುಕ್ರವಾರ ಕತ್ತರಿಸುವ ಕೆಲಸ ಪೂರ್ಣವಾಗಿದೆ. ಡಿ.13 ರಿಂದ 27ನೇ ಗೇಟ್ ಕೂಡ ತೆರವು ಕಾರ್ಯ ನಡೆಯಲಿದೆ.
ಕಳೆದ ಒಂದು ವಾರದಿಂದ ಗೇಟ್‌ಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ತೆರವು ಕಾರ್ಯ ನಡೆಯುತ್ತಿರುವ ಎಲ್ಲ ಗೇಟ್ ಗಳನ್ನು 10 ಅಡಿಯಷ್ಟು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವ ಕಾರ್ಯ ನಡೆಯುತ್ತಿದೆ. ಇನ್ನು ಜಲಾಶಯದಲ್ಲಿ 43 ಅಡಿಗೆ ನೀರು ಇಳಿದ ನಂತರ ಉಳಿದ ಗೇಟ್ ಗಳ ತೆರವು ಕಾರ್ಯ ನಡೆಯಲಿದೆ. ಬಳಿಕ ಹಳೆ ಗೇಟ್‌ಗಳ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆ ಆರಂಭವಾಗಲಿದೆ. ಸದ್ಯ 18, 20, 24ನೇ ಗೇಟ್‌ಗಳ 10 ಅಡಿಯಷ್ಟು ಕತ್ತರಿಸಿ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಲಾಶಯದ ಗೇಟ್‌ಗಳ ಅಳವಡಿಕೆಗೆ ಜಲಾಶಯದ ಮಟ್ಟ 1613 ಅಡಿಗೆ ತಲುಪಬೇಕಿದೆ. ಹಾಗಾಗಿ ಈಗ ಆಂಧ್ರಪ್ರದೇಶದ ಕೋಟಾದ ನೀರನ್ನು ಪ್ರತಿದಿನ 5 ಸಾವಿರ ಕ್ಯೂಸೆಕ್ ನದಿಗೆ ಹರಿಸಲಾಗುತ್ತಿದೆ. ಕಾಲುವೆಗಳಿಗೆ 10,972 ಕ್ಯೂಸೆಕ್, ನದಿಗೆ 5,900 ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿದೆ. ಪ್ರತಿದಿನ 1.8 ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಂದ ಖಾಲಿಯಾಗುತ್ತಿದೆ. ಮೂರು ದಿನದಲ್ಲಿ ನಾಲ್ಕು ಟಿಎಂಸಿ ನೀರು ಖಾಲಿಮಾಡಲಾಗಿದೆ. ಸದ್ಯ ಜಲಾಶಯದಲ್ಲಿ 59.85 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಬಹುತೇಕ ಡಿ.20ರ ನಂತರ ಅದಕ್ಕೆ ಚಾಲನೆ ಸಿಗಲಿದೆ ಎಂದು ಟಿಬಿಬಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದರು.