ಹೊಸಪೇಟೆ ತಾಲೂಕಿನ ಹೊಸ ಮಲಪನಗುಡಿ ಬಳಿ ಮಂಗಳವಾರ ಸಮಾಲೋಚನಾ ಕಾರ್ಯಗಾರದಲ್ಲಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಶಾಸಕ ಎಚ್.ಆರ್.ಗವಿಯಪ್ಪ, ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಇದ್ದರು. 
ವಿಜಯನಗರ

ಹಂಪಿ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ಹೂಡಿಕೆಯ ಗುರಿ

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮ ಅಭಿವೃದ್ಧಿ ಸಮಾಲೋಚನಾ ಕಾರ್ಯಗಾರದಲ್ಲಿ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ
ಹೊಸಪೇಟೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ನಗರದ ಹೊಸ ಮಲಪನಗುಡಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಕುರಿತು ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಗಾರದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಂಪಿಯ ಅಭಿವೃದ್ಧಿ ಕೇವಲ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಸೀಮಿತವಾಗಿಲ್ಲ. ವಿವಿಧ ಇಲಾಖೆಗಳ ಸಮನ್ವಯದ ಅಗತ್ಯವಿರುವುದರಿಂದ, ನಗರಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರ ನೇತೃತ್ವದಲ್ಲಿ ಜಂಟಿ ಸಭೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಗ್ಲೋಬಲ್ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಯೋಜನೆ ರಾಜ್ಯದ 50 ಪ್ರವಾಸಿ ತಾಣಗಳನ್ನು 'ಗ್ಲೋಬಲ್ ಡೆಸ್ಟಿನೇಷನ್'ಗಳನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯಡಿ, ಮೊದಲ ಹಂತದಲ್ಲಿ ಹಂಪಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಈಗಾಗಲೇ ಹಂಪಿಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವಿವರವಾದ ಮಾಸ್ಟರ್ ಪ್ಲಾನ್ ಹಾಗೂ ಜಿಐಎಸ್ ತಂತ್ರಜ್ಞಾನ ಆಧಾರಿತ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. 3 ಸಾವಿರ ಕೋಟಿ ರೂ.ವರೆಗಿನ ಬೃಹತ್ ಹೂಡಿಕೆ ಈ ಯೋಜನೆಗೆ ಕೇಂದ್ರ ಸರ್ಕಾರವು ಸುಮಾರು 1,400 ರಿಂದ 1,500 ಕೋಟಿ ರೂ.ಗಳ ಮೂಲಭೂತ ಅನುದಾನ ಒದಗಿಸಲಿದೆ. ಖಾಸಗಿ ಹೂಡಿಕೆದಾರರು ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಒಟ್ಟು ಹೂಡಿಕೆಯನ್ನು 3 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರವಾಸೋದ್ಯಮ ವಲಯದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ವಿವರಿಸಿದರು.
ಪ್ರವಾಸಿಗರಿಗೆ ಅನುಕೂಲವಾಗುವಂತೆ 20 ಪ್ರಮುಖ ಸ್ಥಳಗಳಲ್ಲಿ ಟ್ರಾವೆಲರ್ ರೂಟ್‌ಗಳನ್ನು ಗುರುತಿಸಲಾಗಿದ್ದು, ಸದ್ಯ 5 ರೂಟ್‌ಗಳು ಸಿದ್ಧವಾಗಿವೆ. ಪರಿಸರ ಸ್ನೇಹಿ ಸಂಚಾರಕ್ಕಾಗಿ ಶೀಘ್ರವೇ 5 ಇ-ವಾಹನಗಳಿಗೆ ಚಾಲನೆ ನೀಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಮುಂಜಾನೆ 4 ಗಂಟೆಯಿAದಲೇ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಎ.ಎಸ್.ಐ. ನಿಯಮಗಳಿಗೆ ಬದ್ಧವಾಗಿ ನದಿಯ ಸ್ನಾನಘಟ್ಟದ ಬಳಿ ಸುರಕ್ಷತಾ ಕ್ರಮಗಳು ಹಾಗೂ ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಮಾಜಿ ಸಚಿವ ಆನಂದ್ ಸಿಂಗ್, ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಸುವಾಸಿಶ್ ದಾಸ್, ಪ್ರವಾಸೋದ್ಯಮ ಇಲಾಖೆ ಆಯುಕ್ತ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಎಎಸ್ಪಿ ಮಂಜುನಾಥ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಇತರರಿದ್ದರು.

ಜಾಗತಿಕ ಪ್ರವಾಸೋದ್ಯಮದಲ್ಲಿ ಕರ್ನಾಟಕ ಅಗ್ರಸ್ಥಾನ

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲು ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರ, ಕೇಂದ್ರದ ಮಹತ್ವಾಕಾಂಕ್ಷೆಯ 'ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ' ಯೋಜನೆಯಡಿ ರಾಜ್ಯದ 50 ಪ್ರವಾಸಿ ತಾಣಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ. ಈ ಪೈಕಿ ಹಂಪಿ, ಮೈಸೂರು ಮತ್ತು ಲಕ್ಕುಂಡಿಯನ್ನು ಜಾಗತಿಕ ಮಟ್ಟದ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ರೂಪಿಸಲು ಆದ್ಯತೆ ನೀಡಲಾಗಿದೆ. ಹಂಪಿಯ ಅಭಿವೃದ್ಧಿಗೆ 'ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ಆರ್ಗನೈಸೇಶನ್' ರಚಿಸಲಾಗುವುದು. ಜಿಂದಾಲ್ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಹಾಗೂ ಪ್ರಮುಖ ನಗರಗಳಿಂದ ಐತಿಹಾಸಿಕ ತಾಣಗಳಿಗೆ ರೈಲು ಸಂಪರ್ಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಸಹಭಾಗಿತ್ವವಿಲ್ಲದೆ ಪ್ರವಾಸೋದ್ಯಮದ ಅಭಿವೃದ್ಧಿ ಅಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಹಂಪಿ ಉತ್ಸವದ ಮೈಸೂರು ದಸರೆಯಷ್ಟೇ ಮಹತ್ವ

ಮೈಸೂರು ದಸರೆಯಷ್ಟೇ ಮಹತ್ವ ಪಡೆದಿರುವ ಹಂಪಿ ಉತ್ಸವದ ದಿನಾಂಕ ಹಾಗೂ ಆಚರಣೆಯ ಕುರಿತು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ನಂತರ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದು, ಸ್ಥಳೀಯರಿಗೆ ಅನುಕೂಲವಾಗುವಂತೆ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
"

ಹಂಪಿಯಲ್ಲಿ 15.4 ಕಿ.ಮೀ ಉದ್ದದ ಹೆರಿಟೇಜ್ ವಾಕ್ ನಿರ್ಮಾಣ, ಹಂಪಿ ರೈಲು ನಿಲ್ದಾಣಕ್ಕೆ ಪಾರಂಪರಿಕ ವಿನ್ಯಾಸ, ಅಂತಾರಾಷ್ಟ್ರೀಯ ಗುಣಮಟ್ಟದ ಇಂಟರ್‌ಪ್ರಿಟೇಷನ್ ಸೆಂಟರ್ ಹಾಗೂ ಪ್ರವಾಸೋದ್ಯಮ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ.

— ಎಚ್.ಆರ್. ಗವಿಯಪ್ಪ, ಶಾಸಕ, ಹೊಸಪೇಟೆ


"

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಬೇಕು. ಜತೆಗೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಈ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ.

— ಡಾ.ಎನ್.ಟಿ. ಶ್ರೀನಿವಾಸ್, ಶಾಸಕ, ಕೂಡ್ಲಿಗಿ