ಹರಪನಹಳ್ಳಿಯಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. 
ವಿಜಯನಗರ

ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ

ಹರಪನಹಳ್ಳಿ: ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ರೈತರಿಗೆ ಬೆಳೆ ವಿಮೆ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಮ್ಮದ್ ಅಶ್ರಫ್‌ಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಡಾ.ಬಾಬುಜಗಜೀವನ ರಾಮ್ ಭವನದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಆ.10ರವರೆಗೆ ರಾಗಿ, ಸಜ್ಜೆ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲು ಸಮಯವಿದ್ದು, ಅಷ್ಟರೊಳಗೆ ಮಳೆಯಾದರೆ ಅನುಕೂಲವಾಗಲಿದೆ. ತಾಲೂಕಿನಲ್ಲಿ ಈವರೆಗೆ ಶೇ.47 ಬಿತ್ತನೆಯಾಗಿದ್ದು, ರೈತರು ಬರಗಾಲ ಎದುರಿಸಲು ಸಿದ್ಧರಾಗಬೇಕು ಎಂದರು.
ಕ್ಷಾಮದಿಂದ ಜಲಮೂಲಗಳು ಕ್ಷೀಣಿಸುವ ಮುನ್ನ ಜನರಿಗೆ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಖಾಸಗಿ ಬೋರ್‌ವೆಲ್‌ಗಳ ಮಾಲೀಕರು ಜಮೀನುಗಳಿಗೆ ನೀರನ್ನು ಬಿಟ್ಟುಕೊಳ್ಳದೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನೀರನ್ನು ಬಿಟ್ಟು ಅನುಕೂಲ ಮಾಡಿದ್ದಾರೆ. ಆದರೆ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜ್ಯಾನಾಯ್ಕ ರೈತರಿಗೆ ಮೂರು ತಿಂಗಳಾದರೂ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ. ಉದ್ಧಟತನ ತೋರದೆ ರೈತರಿಗೆ ಕೂಡಲೆ ಹಣ ನೀಡಿ ಎಂದು ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಸೂಚಿಸಿದರು.
ಆರೋಗ್ಯ ಇಲಾಖೆಯ ಎರಡು ಮೊಬೈಲ್ ಆಂಬುಲೆನ್ಸ್‌ಗಳ ಕಾರ್ಯನಿರ್ವಹಣೆ ಯಾಕೆ ಸ್ಥಗಿತಗೊಳಿಸಲಾಗಿದೆ ಎಂದು ಟಿಎಚ್‌ಒ ಡಾ.ಅರವಿಂದ್ ಅವರನ್ನು ಶಾಸಕಿ ಪ್ರಶ್ನಿಸಿದರು. ಗುತ್ತಿಗೆದಾರರ ಹಣ ಬಾಕಿ ಇರುವುದರಿಂದ ಆಂಬುಲೆನ್ಸ್‌ಗಳ ಕಾರ್ಯನಿರ್ವಹಣೆ ಸ್ಥಗಿಯಗೊಳಿಸಲಾಗಿದೆ ಎಂದು ಟಿಎಚ್‌ಒ ತಿಳಿಸಿದರು. ಗುತ್ತಿಗೆದಾರರಿಗೆ ಹಣ ಪಾವತಿಸಿ ಆಂಬುಲೆನ್ಸ್‌ಗಳ ಮರು ಚಾಲನೆ ಮಾಡಬೇಕು. ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಿ ಎಂದು ಶಾಸಕಿ ತಾಕೀತು ಮಾಡಿದರು.
ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಕಳಪೆಯಾಗಿದ್ದು, ಗುಣಮಟ್ಟದ ಆಹಾರ ನೀಡಬೇಕು. ತಾಳೆ ಬೆಳೆಯಿಂದ ಹೆಚ್ಚು ಲಾಭವಿದ್ದು ರೈತರು ಬೆಳೆಯಲು ಜಾಗೃತಿ ಮೂಡಿಸಬೇಕು. ಬಿಡಿಸಿಸಿ ಬ್ಯಾಂಕ್ ಹೈನುಗಾರಿಕೆಗೆ ಸಹಾಯಧನ ನೀಡುತ್ತಿದ್ದು, ಅದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಹರಪನಹಳ್ಳಿಯ ಅಯ್ಯನಕೆರೆ ಕಲುಷಿತಗೊಂಡಿದ್ದು, ಮೀನು ಸಾಕಣೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿ ಎಂದು ಶಾಸಕಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.