- ಹೊರಗಿನ ಸಚಿವರಿಗಾಗಿ ಸ್ಥಳೀಯ ಕಾರ್ಯಕರ್ತರ ಜೈಕಾರ
ಹೊಸಪೇಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನಕ್ಕಾಗಿ ತೀವ್ರ ಗುದ್ದಾಟ ನಡಿಯುತ್ತಿದ್ದರೆ, ಇತ್ತ ವಿಜಯನಗರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮಾತ್ರ ವಿಚಿತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸಚಿವಾಕಾಂಕ್ಷಿಗಳ ಬೆಂಬಲಿಗರು ಹೈಡ್ರಾಮಾ, ಲಾಬಿ, ಒತ್ತಡ ತಂತ್ರಗಳ ಮೂಲಕ ಆಕ್ರೋಶದ ಜ್ವಾಲೆ ಹೊರಹಾಕುತ್ತಿದ್ದರೆ, ವಿಜಯನಗರ ಜಿಲ್ಲೆಯ ಶಾಸಕರ ಪರವಾಗಿ ಸಚಿವ ಸ್ಥಾನ ಕೇಳುವವರೇ ಇಲ್ಲದಂತಾಗಿದೆ!
ಜಿಲ್ಲೆಯಲ್ಲಿ ಮೂವರು ಪ್ರಮುಖ ಶಾಸಕರಿದ್ದರೂ, ಸ್ಥಳೀಯ ಕಾರ್ಯಕರ್ತರು ಮಾತ್ರ ತಮ್ಮ ನಾಯಕರನ್ನು ಬಿಟ್ಟು ಹೊರ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಧ್ವನಿ ಎತ್ತುತ್ತಿರುವುದು ಸದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ನ ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಸ್ಥಾನವಿಲ್ಲ ಎಂಬ ಅಲಿಖಿತ ನಿಯಮ ವಿಜಯನಗರ ಜಿಲ್ಲೆಯ ಶಾಸಕರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಶಾಸಕರ ಎಚ್.ಆರ್.ಗವಿಯಪ್ಪ ಅವರು ಈ ಹಿಂದೆ 2004ರಲ್ಲಿ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. 2008ರಲ್ಲಿ ಕಾಂಗ್ರೆಸ್‌ನಿAದ ಸ್ಪರ್ಧಿಸಿ ಸೋತರು. ಬಳಿಕ 2018ರಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರಿ ಸೋಲುಂಡಿದ್ದರು. ತದನಂತರ 2023ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿ ಶಾಸಕರಾಗಿದ್ದಾರೆ.
ತಾಂತ್ರಿಕವಾಗಿ ಇವರು ಎರಡು ಬಾರಿ ಶಾಸಕರಾಗಿದ್ದರೂ, ಕಾಂಗ್ರೆಸ್‌ನಿAದ ಆಯ್ಕೆಯಾಗಿರುವುದು ಇದೇ ಮೊದಲ ಬಾರಿ. ಸ್ವಂತ ಜಿಲ್ಲೆಯ ಶಾಸಕರ ಪರವಾಗಿ ಹೋರಾಟ ಮಾಡಬೇಕಾದ ಕಾರ್ಯಕರ್ತರು, ನೆರೆಯ ಅಥವಾ ಹೊರ ಜಿಲ್ಲೆಯ ನಾಯಕರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜಿಲ್ಲೆಯ ಶಾಸಕರ ಪರವಾಗಿ ಧ್ವನಿ ಎತ್ತಲು ಬೆರಳೆಣಿಕೆಯಷ್ಟು ಬೆಂಬಲಿಗರು ಮಾತ್ರ ಉಳಿದುಕೊಂಡಿದ್ದಾರೆ. ಇದಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಅವರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸದೇ ಇರುವುದು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಹೊಂದಿರುವ ವೈಮನಸ್ಸು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇನ್ನು ಕೂಡ್ಲಿಗಿ ಶಾಸಕ ಎನ್.ಟಿ.ಶ್ರೀನಿವಾಸ್ ಹಾಗೂ ಹರಪನಹಳ್ಳಿ ಶಾಸಕ ಲತಾ ಮಲ್ಲಿಕಾರ್ಜುನ ಈ ಇಬ್ಬರೂ ಸಾಸಕರು ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದು, ಇವರಿಗೂ ಸಚಿವ ಸ್ಥಾನದ ರೇಸ್‌ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾಂಗ್ರೆಸ್‌ನಲ್ಲಿ ಭಿನ್ನಮತ
ವಿಜಯನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಎಂಬುದು ಮರೀಚಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ ಆರು ಪ್ರತ್ಯೇಕ ಬಣಗಳು ಸಕ್ರಿಯವಾಗಿದ್ದು, ಒಬ್ಬರ ಮುಖ ಕಂಡರೆ ಮತ್ತೊಬ್ಬರಿಗೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಎಚ್.ಆರ್.ಗವಿಯಪ್ಪ ಬಣ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ ಬಣ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿರಾಜ್ ಶೇಕ್ ಬಣ, ಸಂಸದ ರಾಜಶೇಖರ ಹಿಟ್ನಾಳ್ ಬಣ, ರಾಣಿ ಸಂಯುಕ್ತ ಬಣ, ಮಾಜಿ ಶಾಸಕ ಭೀಮಾನಾಯ್ಕ ಬಣ ಸಕ್ರಿಯವಾಗಿದೆ. ಹಿರಿಯ ನಾಯಕರ ಜಗಳ ಯುವ ಕಾಂಗ್ರೆಸಿಗರಿಗೂ ಹಬ್ಬಿದ್ದು, ಯೂತ್ ಕಾಂಗ್ರೆಸ್‌ನಲ್ಲೂ ಪ್ರತ್ಯೇಕ ಗುಂಪುಗಳು ತಲೆ ಎತ್ತಿವೆ. ಇದು ಪಕ್ಷದ ಆಂತರಿಕ ಶಿಸ್ತನ್ನು ಸಂಪೂರ್ಣವಾಗಿ ಹದಗೆಡಿಸಿದೆ.
ಹೈಕಮಾಂಡ್‌ಗೆ ತಲೆನೋವಾದ ವಿದ್ಯಮಾನ
ಸಚಿವ ಸ್ಥಾನಕ್ಕಾಗಿ ರಾಜ್ಯಾದ್ಯಂತ ಸ್ವಜಾತಿ, ಸ್ವಪಕ್ಷದ ನಾಯಕರ ಪರವಾಗಿ ಒತ್ತಡ ತಂತ್ರಗಳು ನಡೆಯುತ್ತಿದ್ದರೆ, ವಿಜಯನಗರದ ಕಾರ್ಯಕರ್ತರು ಮಾತ್ರ ತಮ್ಮದೇ ಶಾಸಕರನ್ನು ನಿರ್ಲಕ್ಷಿಸಿ ಹೊರಗಿನವರ ಮೇಲೆ ಒಲವು ತೋರುತ್ತಿರುವುದು ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಆಶ್ಚರ್ಯ ಮೂಡಿಸಿದೆ. ಜಿಲ್ಲಾ ಕಾಂಗ್ರೆಸ್‌ನ ಈ ಭಿನ್ನಮತ ಮತ್ತು ಬಣ ರಾಜಕೀಯ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಯಾವ ರೀತಿ ಮುಳುವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
"
ಒಲೈಕೆ ರಾಜಕಾರಣ ಮಾಡಲು ನನಗೆ ಇಷ್ಟ ಇಲ್ಲ. ನನ್ನ ಬೆಂಬಲಿಗರು ಕೂಡ ಪ್ರತಿಭಟನೆ ಮಾಡಬಹುದು. ಆದರೆ, ಅಂತಹ ಕೆಟ್ಟ ರಾಜಕಾರಣ ನಾನು ಮಾಡಲ್ಲ. ಇಲ್ಲಿ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆ ಅಭಿವೃದ್ಧಿ ಮಾಡುವ ಅವಕಾಶ ಸಿಗುತ್ತದೆ. ಪಕ್ಷದಲ್ಲಿ ಯಾವುದೇ ತಿರ್ಮಾನ ತಗೆದುಕೊಂಡರು ನಾನು ಒಪ್ಪಿಕೊಳ್ಳುವೆ.
— ಎಚ್.ಆರ್.ಗವಿಯಪ್ಪ, ಶಾಸಕ, ಹೊಸಪೇಟೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳೆದರೂ ಜಿಲ್ಲೆಗೆ ಸಚಿವ ಸ್ಥಾನ ನೀಡಿಲ್ಲ. ಹೊಸಬರಿಗೆ ಸಚಿವ ಸ್ಥಾನ ನೀಡಲ್ಲ ಎಂದು ಹೈಕಮಾಂಡ್ ನಲ್ಲಿ ತಿರ್ಮಾನ ಆಗಿದೆ. ಗವಿಯಪ್ಪ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬಹುದು. ಆದರೆ, ಪಕ್ಷದಲ್ಲಿ ಯಾವ ತಿರ್ಮಾನ ತಗೆದುಕೊಳ್ಳುತ್ತಾರೋ ಕಾದುನೋಡಬೇಕಿದೆ.
— ಸಿರಾಜ್ ಶೇಕ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ವಿಜಯನಗರ