ಕಂಪ್ಲಿಯಲ್ಲಿ ಸಕ್ಕರೆ ಆರತಿ ಕೊಳ್ಳುತ್ತಿರುವ ಮಹಿಳೆಯರು. 
ವಿಜಯನಗರ

ಸಕ್ಕರೆ ಆರತಿ ಖರೀದಿ ಜೋರು

ಪ್ರಮುಖ ಮುಖ್ಯಾಂಶಗಳು

  • ಗೌರಿಗೆ ಬೆಳಗಿ ಸಂಭ್ರಮಿಸಿದ ಮಹಿಳೆಯರು
  • ವಸ್ತ್ರ ಧರಿಸಿ ದೀಪಾರತಿ
  • ಹಬ್ಬದ ಕಳೆನ್ನು ಮುಸುಕುಗೊಳಿಸುವ ಆತಂಕ
ಕಂಪ್ಲಿ : ಗೌರಿಹುಣ್ಣಿಮೆ ನಿಮಿತ್ತ ಗೌರಮ್ಮಳಿಗೆ ಬೆಳಗಲು ಸಕ್ಕರೆ ಆರತಿ ಕೊಳ್ಳುವಲ್ಲಿ ಪಟ್ಟಣದ ಪೇಟೆಯಲ್ಲಿ ಬುಧವಾರ ಸಡಗರ ಸಂಭ್ರಮ ಇತ್ತು. 
ಪಟ್ಟಣ ಸೇರಿ ಗ್ರಾಮೀಣ ಮಹಿಳೆಯರು ಗೌರಮ್ಮನಿಗೆ ಬೆಳಗಲು ಸಡಗರ ಸಂಭ್ರಮಗಳಿಂದ ಸಕ್ಕರೆ ಆರತಿ ಕೊಳ್ಳಲು ಮುಂದಾಗಿದ್ದರು. ಕೆಜಿ ಸಕ್ಕರೆ ಆರತಿಗೆ 120ರೂ.ಇದ್ದು ಕ್ರಮೇಣ ಕೆಜಿಗೆ 300ರೂ.ತನಕ ದರ ಏರಿಕೆಯಾಗಲಿದೆ. ಕಳೆದ ವರ್ಷ ಕೆಜಿಗೆ 80ರೂ.ಯಿದ್ದ ಸಕ್ಕರೆ ಆರತಿ ಕ್ರಮೇಣ 200 ರೂ.ಗೆ ಏರಿಕೆಗೊಂಡು ಮಾರಾಟಗೊಂಡಿತು. 
300ರೂ. ದರ ಏರಿಕೆ
ಕಳೆದ ವರ್ಷ ಸಕ್ಕರೆ ಬೆಲೆ ಕೆಜಿಗೆ 34ರೂ. ಇತ್ತು. ಈ ವರ್ಷ ಸಕ್ಕರೆ ದರ ಕೆಜಿಗೆ 44ರೂ. ಇದ್ದದ್ದರಿಂದ ಆರತಿ ದರ 120ರೂ. ಮಾರಾಟವಾಗುತ್ತಿದೆ. ಗುರುವಾರ ಸಂಜೆ ವೇಳೆಗೆ 300ರೂ. ದರ ಏರಿಕೆಗೊಳ್ಳಲಿದೆ. ಕಳೆದ ವರ್ಷ 12ದಬ್ಬುವ ಬಂಡಿಗಳಲ್ಲಿ ಆರತಿ ಮಾರಾಟವಾಗುತ್ತಿದ್ದವು. ಈ ವರ್ಷ ಐದಾರು ಬಂಡಿಗಳಲ್ಲಿ ಮಾತ್ರ ಆರತಿ ಮಾರಾಟವಾಗುತ್ತಿದ್ದು ವ್ಯಾಪಾರದ ಪೈಪೋಟಿ ಕಡಿಮೆಯಿದೆ. ಚನ್ನಾಗಿ ಮಳೆಯಾಗಿದ್ದರಿಂದ ಗ್ರಾಮೀಣ ಕೃಷಿಕರು ಆರತಿ ಕೊಳ್ಳುವಲ್ಲಿ ಉತ್ಸಾಹ ತೋರಿದ್ದಾರೆ. ಈ ಬಾರಿ ಆರತಿ ತಯಾರಕರ ಕೈಹಿಡಿದಿದೆ ಎಂದು ಆರತಿ ತಯಾರಕ ಉತ್ತಂಗಿ ಸುರೇಶ ತಿಳಿಸಿದರು.
ಪಟ್ಟಣದ ಬಣ್ಣದ ಚೌಡೇಶ್ವರಿ, ಪೇಟೆ ಬಸವೇಶ್ವರ, ಕಾಳಮ್ಮ-ಶಂಕ್ರಮ್ಮ ದೇವಸ್ಥಾನ ಸೇರಿ ನಾನಾ ದೇವಸ್ಥಾನಗಳಲ್ಲಿ ಗೌರಮ್ಮನ ಪ್ರತಿಮೆ ಪ್ರತಿಷ್ಠಾಪಿಸಿದ್ದು, ಮಹಿಳೆಯರು ಹೊಸ ವಸ್ತ್ರ ಧರಿಸಿ ದೀಪಾರತಿಯೊಂದಿಗೆ ಸಕ್ಕರೆ ಆರತಿ ಬೆಳಗಿ ಸಂಭ್ರಮಿಸಿದರು. ಹುಡುಗರು ಪಟಾಕಿ ಸಿಡಿಸಿದರು. ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ರಾಜ್ಯದಲ್ಲಿಯೇ ವಿಶೇಷವಾದ ಕೊಂತಿರೊಟ್ಟಿ ಸಂಭ್ರಮ ನಡೆಯಲಿದೆ. ಮೋಡ ಮುಸುಕಿದ ವಾತಾವರಣ, ತುಂತುರು ಮಳೆ ಹಬ್ಬದ ಕಳೆನ್ನು ಮುಸುಕುಗೊಳಿಸುವ ಆತಂಕವೂ ಇದೆ.