ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪ್ರಗತಿ ಪರಿಶೀಲನಾ ನಡೆಸಿದರು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ ಇದ್ದರು.
- ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಕವಿತಾ ಮನ್ನಿಕೇರಿ ಸೂಚನೆ
ಹೊಸಪೇಟೆ: ಜಿಲ್ಲೆಯಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಕಾಮಗಾರಿಗಳಿಂದ ಅಪಘಾತಗಳು ಹೆಚ್ಚುತ್ತಿದ್ದು, ಇದನ್ನು ಶೂನ್ಯಕ್ಕೆ ತರಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಣಿ ಅಪಘಾತಗಳು ಸಂಭವಿಸುವ 'ಬ್ಲ್ಯಾಕ್ ಸ್ಪಾಟ್'ಗಳನ್ನು ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಗುರುತಿಸಬೇಕು. ಆ ಜಾಗಗಳಲ್ಲಿ ತಕ್ಷಣವೇ ವೈಜ್ಞಾನಿಕ ರಸ್ತೆ ಉಬ್ಬುಗಳು, ಸೂಚನಾ ಫಲಕ, ರಿಫ್ಲೆಕ್ಟರ್ ಹಾಗೂ ಸೋಲಾರ್ ಬ್ಲಿಂಕರ್ ದೀಪಗಳನ್ನು ಅಳವಡಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಲಘು ವಾಹನ ಚಾಲಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ.
ವಿದ್ಯಾರ್ಥಿಗಳ ಸುರಕ್ಷತೆ: ಶಾಲಾ-ಕಾಲೇಜುಗಳ ಮುಂಭಾಗದಲ್ಲಿ ಜೀಬ್ರಾ ಕ್ರಾಸಿಂಗ್, ವೇಗ ನಿಯಂತ್ರಕ ಹಂಪ್ಸ್ ಅಳವಡಿಸಬೇಕು. ಅಗತ್ಯವಿದ್ದಲ್ಲಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಿಸಬೇಕು. ಹೆದ್ದಾರಿ ಬದಿಯಲ್ಲಿ ಭಾರಿ ವಾಹನಗಳ ಅನಧಿಕೃತ ಪಾರ್ಕಿಂಗ್‌ಗೆ ದಂಡ ವಿಧಿಸಿ. ರಸ್ತೆ ಬದಿಯ ದೃಷ್ಟಿ ಅಂಧತ್ವ ಉಂಟುಮಾಡುವ ಅನಧಿಕೃತ ಫ್ಲೆಕ್ಸ್, ಬೋರ್ಡ್ ಹಾಗೂ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ. ಅಪಘಾತದ ಮೊದಲ ಒಂದು ಗಂಟೆ (ಗೋಲ್ಡನ್ ಅವರ್) ಅತ್ಯಂತ ಅಮೂಲ್ಯವಾಗಿದ್ದು, ಹೆದ್ದಾರಿಗಳಲ್ಲಿ ದಿನದ 24 ಗಂಟೆ ಆಂಬುಲೆನ್ಸ್ ಸೇವೆ ಲಭ್ಯವಿರಬೇಕು. ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಹೆದ್ದಾರಿಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ವಿದ್ಯುತ್ ದೀಪಗಳ ಕೊರತೆ ನೀಗಿಸಲು ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಈಗಾಗಲೇ ಜಂಟಿ ಪರಿಶೀಲನೆ ನಡೆಸಿ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಅಪಘಾತ ನಿಯಂತ್ರಣಕ್ಕೆ ಇಲಾಖೆಗಳ ಸಹಕಾರ ಅಗತ್ಯ ಎಂದರು.