ಹರಪನಹಳ್ಳಿ ತಾಲೂಕು ಮತ್ತಿಹಳ್ಳಿ ಗ್ರಾಮದಲ್ಲಿ ಕೂಸಿನ ಮನೆ ಹಾಗೂ ಆಂಜನೇಯ ದೇವಸ್ಥಾನಕ್ಕೆ ಸಮೀಪದಲ್ಲಿರುವ ಮದ್ಯದಂಗಡಿ ತೆರವುಗೊಳಿಸುವಂತೆ ತಾಲೂಕು ಪಂಚಾಯಿತಿ ಇಒ ವೈ.ಎಚ್.ಚಂದ್ರಶೇಖರ್ ಸೂಚಿಸಿದರು.
ಹರಪನಹಳ್ಳಿ: ಮತ್ತಿಹಳ್ಳಿ ಗ್ರಾಮಕ್ಕೆ ತಾಪಂ ಇಒ ವೈ.ಎಚ್.ಚಂದ್ರಶೇಖರ್ ಗುರುವಾರ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು.
ಗ್ರಾಮಕ್ಕೆ ಸಾರಿಗೆ ಸೌಕರ್ಯ ಇಲ್ಲದಿರುವುದು, ಶಿಕ್ಷಣ, ನೀರು ಸೇರಿದಂತೆ ಇತರ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ‘ವಿಜಯವಾಣಿ’ಯಲ್ಲಿ ‘ಮತ್ತಿಹಳ್ಳಿ ಅಭಿವೃದ್ಧಿ ಮರೀಚಿಕೆ’ ಶೀರ್ಷಿಕೆಯಡಿ ಗುರುವಾರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ತಾಪಂ ಇಒ ವೈ.ಎಚ್.ಚಂದ್ರಶೇಖರ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ಗ್ರಾಮಕ್ಕೆ ಭೇಟಿ ನೀಡಿದ್ದರು.
ಗ್ರಾಮದಲ್ಲಿ ಕೂಸಿನ ಮನೆ ಹಾಗೂ ಆಂಜನೇಯ ದೇವಸ್ಥಾನಕ್ಕೆ ಸಮೀಪದಲ್ಲಿರುವ ಮದ್ಯದಂಗಡಿ ಪರಿಶೀಲಿಸಿದರು. ಅಬಕಾರಿ ಕಾಯ್ದೆ ಉಲ್ಲಂಘಿಸಿ ನಿರ್ಮಿಸಿರುವ ಮದ್ಯದಂಗಡಿ ತೆರವು ಮಾಡುವಂತೆ ಮಾಲೀಕರಿಗೆ ಸೂಚಿಸಿದರು.
ದಲಿತರ ಕಾಲನಿಗೆ ಭೇಟಿ ನೀಡಿ ಕಲುಷಿತ ನೀರು ಸರಬರಾಜು ಆಗುತ್ತಿರುವುದನ್ನು ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದರು.