ಹೊಸಪೇಟೆ ಸಹಕಾರ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕರಾದ ರಾಜೂ ಗೌಡ, ಎಂ.ಎಸ್.ಸೋಮಲಿAಗಪ್ಪ, ಪ್ರತಾಪ್ ಗೌಡ ಪಾಟೀಲ್ ಇತರರಿದ್ದರು.
- ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ'ದಲ್ಲಿ ರಮೇಶ್ ಜಾರಕಿಹೊಳಿ ಭರವಸೆ
ಹೊಸಪೇಟೆ : ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸಂವಿಧಾನಬದ್ಧವಾಗಿ ಶೇಕಡಾ 7.5 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದರು.
ಇಲ್ಲಿನ ಸಹಕಾರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 22 ತಿಂಗಳು ಬಾಕಿ ಇದ್ದು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ನಾವೆಲ್ಲರೂ ಶಾಸಕರಾಗಿ, ಸಚಿವರಾಗುತ್ತೇವೆ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಮಾಜಕ್ಕೆ ಶೇ 7.5 ರಷ್ಟು ಮೀಸಲಾತಿ ನೀಡದಿದ್ದರೆ, ನಾನು ನನ್ನ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ವೇದಿಕೆಯಲ್ಲೇ ಮಹತ್ವದ ಘೋಷಣೆ ಮಾಡಿದರು.
ಇದೇ ವೇಳೆ ತಮ್ಮ ಸಹೋದರ, ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನೇನಾದರೂ ಸತೀಶ್ ಜಾರಕಿಹೊಳಿ ಸ್ಥಾನದಲ್ಲಿದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದೆ, ಆದರೆ ಅವರಿಗೆ ಆ ಶಕ್ತಿ ಇಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ರಾಜೂಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಕೋರ್ಟ್ನಲ್ಲಿ ಸ್ಟೇ ತರುವ ಮೂಲಕ ನಮ್ಮ ಸಮಾಜಕ್ಕೆ ದ್ರೋಹ ಬಗೆದಿದೆ. ಇದರಿಂದಾಗಿ ನಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಕೇಸ್‌ಗಳನ್ನು ನಡೆಸಲು ದೆಹಲಿಯಿಂದ ವಕೀಲರು ಬರುತ್ತಾರೆ. ಆದರೆ ನಮ್ಮ ಸಮಾಜದ ಮೀಸಲಾತಿ ಪರ ವಾದಿಸಲು ಕೋರ್ಟ್ಗೆ ವಕೀಲರೇ ಹೋಗುತ್ತಿಲ್ಲ. ಕಾಂಗ್ರೆಸ್ ಶಾಸಕರು ಸಮಾಜದ ಹಿತ ರಕ್ಷಿಸದಿದ್ದರೆ ರಾಜೀನಾಮೆ ನೀಡಲಿ. ಈ ಜಾಗೃತಿ ಸಮಾವೇಶ ಮುಂದಿನ ದಿನಗಳಲ್ಲಿ ಜ್ವಾಲಾಮುಖಿಯಾಗಲಿದ್ದು, ಆಗ ಸರ್ಕಾರಕ್ಕೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.