- ಅಧ್ಯಕ್ಷ, ನಿರ್ದೇಶಕರ ವಿರುದ್ಧ ಎಫ್‌ಐಆರ್
ಹೊಸಪೇಟೆ: ಆಡಳಿತ ಮಂಡಳಿಯ ನಿರಂತರ ಮಾನಸಿಕ ಕಿರುಕುಳ ಹಾಗೂ ಸಂಬಳ ನೀಡದಿದ್ದಕ್ಕೆ ಮನನೊಂದು ನಗರದ ಚಿತ್ತವಾಡ್ಗಿ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಕಾರ್ಯದರ್ಶಿ ಜಿ. ನಿಂಗಪ್ಪ (55) ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೃತರು ಜಿ. ನಿಂಗಪ್ಪ ಹಳೆ ಮಲಪನಗುಡಿಯ ನಿವಾಸಿಯಾಗಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಚಿತ್ತವಾಡ್ಗಿಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೊಸೈಟಿಯ ಅಧ್ಯಕ್ಷ ಸತೀಶ ಹಾಗೂ ನಿರ್ದೇಶಕ ವಡ್ಡಿನ ಸೀನಪ್ಪ ಅವರು ಕಳೆದ ನಾಲ್ಕೈದು ತಿಂಗಳಿಂದ ಲೆಕ್ಕಪತ್ರದ ವಿಚಾರವಾಗಿ ನಿಂಗಪ್ಪ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದು, ಸುಮಾರು 5 ತಿಂಗಳಿಂದ ವೇತನವನ್ನೂ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ತೀವ್ರ ನೊಂದ ನಿಂಗಪ್ಪ ಕಚೇರಿಯಲ್ಲೇ ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ಪುತ್ರ ಶಶಿಕಿರಣ ನೀಡಿದ ದೂರಿನ ಮೇರೆಗೆ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷ ಸತೀಶ ಹಾಗೂ ನಿರ್ದೇಶಕ ವಡ್ಡಿನ ಸೀನಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.