ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಸರ್ವಿಸ್ ರಸ್ತೆ ಕುಸಿದು ಸಿಲುಕಿರುವ ಭತ್ತದ ಲಾರಿ
- 33 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಆರೋಪ!
ಹೊಸಪೇಟೆ: ತಾಲೂಕಿನ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಸರ್ವಿಸ್ ರಸ್ತೆ ನಿರ್ಮಾಣಗೊಂಡು ಎರಡೇ ವಾರದಲ್ಲಿ ಕುಸಿದು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಕಾಮಗಾರಿಯ ಅತ್ಯಂತ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯೆಂಬAತೆ ಚಲಿಸುತ್ತಿದ್ದ ಟ್ರಕ್ ರಸ್ತೆಯ ಮಧ್ಯದಲ್ಲೇ ಸಿಲುಕಿಕೊಂಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 50ರ ಡಣಾಪುರದಿಂದ ಮರಿಯಮ್ಮನಹಳ್ಳಿಯ ವರೆಗೆ ಎರಡು ಬದಿಗಳಲ್ಲಿ ಮೇಲ್ಸೇತುವೆ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 33 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಸಂಸದ ಇ.ತುಕಾರಾಂ ಅವರು ಈ ಕಾಮಗಾರಿಗೆ ಅದ್ಧೂರಿಯಾಗಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಭೂಮಿ ಪೂಜೆ ಮುಗಿದು ಕಾಮಗಾರಿ ಆರಂಭವಾದ ಕೆಲವೇ ದಿನಗಳಲ್ಲಿ ರಸ್ತೆ ಕುಸಿದಿರುವುದು ಇಡೀ ಯೋಜನೆಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ.
ಗುತ್ತಿಗೆ ಪಡೆದ ಕಂಪನಿಯು ಹಣ ಉಳಿತಾಯ ಮಾಡುವ ದುರುದ್ದೇಶದಿಂದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಭದ್ರವಾದ ಮಣ್ಣನ್ನು ಬಳಸುವ ಬದಲಾಗಿ, ಕೈಗಾರಿಕಾ ತ್ಯಾಜ್ಯವಾದ ಪ್ಲೈ ಆಶ್ ಬಳಸಿ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ರಸ್ತೆಯು ವಾಹನಗಳ ಕನಿಷ್ಠ ಭಾರವನ್ನೂ ತಡೆದುಕೊಳ್ಳಲಾಗದೆ ಕುಸಿದು ಬಿದ್ದಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಲೂಟಿ. ಗುತ್ತಿಗೆದಾರರು ಲಾಭದ ಆಸೆಗೆ ಬಿದ್ದು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶವಾಗಿದೆ.
ಸದ್ಯ ರಸ್ತೆಯಲ್ಲಿ ಬುಧವಾರ ಲಾರಿ ಸಿಲುಕಿಕೊಂಡಿರುವುದರಿAದ ಈ ಭಾಗದಲ್ಲಿ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ವಿಜಯನಗರ ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣ ಪೋಲು ಮಾಡುತ್ತಿರುವ ಗುತ್ತಿಗೆ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಈ ಇಡೀ ಯೋಜನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸ್ಥಳೀಯರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.