ಗೊಲ್ಲರಹಳ್ಳಿ ಗ್ರಾಮಸ್ಥರು ಮಂಗಳವಾರ ಸಂಜೆ ಕಾಳಿಕಾದೇವಿ ಹಾಗೂ ಆಂಜನೇಯಸ್ವಾಮಿ ದೇವರ ಪಲ್ಲಕ್ಕಿಯನ್ನು ಮೆರವಣಿಗೆ ನಡೆಸಿದರು.
- ಮನೆಗಳಿಗೆ ಬೀಗ ಜಡಿದು ಹೊಲ, ಗದ್ದೆಗಳಲ್ಲಿ ಒಂದು ದಿನ ವಾಸ್ತವ್ಯ
ಹೊಸಪೇಟೆ: ಗ್ರಾಮದೇವತೆ ಕಾಳಿಕಾದೇವಿಯೊಂದಿಗೆ ಗ್ರಾಮಸ್ಥರೆಲ್ಲರು ಊರು ತೋರೆದು ಹೊಲ ಗದ್ದೆಗಳಿಗೆ ಒಂದು ದಿನ ಗುಳೆ ಹೋದ ವಿಶೇಷ ಸಂಪ್ರದಾಯ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಗೊಲ್ಲರಹಳ್ಳಿಯಲ್ಲಿ ಮಂಗಳವಾರ ನಡೆಯಿತು.
ಗ್ರಾಮದಲ್ಲಿ ಆರು ನೂರು ಮನೆಗಳಿದ್ದು, ಮೂರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ಯಾವುದೇ ರೀತಿ ಕಾಯಿಲೆಗಳು ಬಾರದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಗುಳೆ ಹೋಗುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಗ್ರಾಮದ ಸುತ್ತಲೂ ಒಂದು ಪ್ರಾಣಿಯೂ ನುಸಳದಂತೆ ಮುಳ್ಳಿನ ಪಾರಿಬೇಲಿ ಹಾಕಿದ್ದರು. ಬೆಳಿಗ್ಗೆ 8 ಗಂಟೆಗೆ ಗ್ರಾಮಸ್ಥರೆಲ್ಲರು ಗ್ರಾಮ ದೇವತೆ ಕಾಳಿಕಾದೇವಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಕುಟುಂಬ ಸಮೇತ ಅಗಸಿ ಬಾಗಿಲ ಮೂಲಕ ಹೊರ ನಡೆದರು. ಅಲ್ಲದೆ ತಮ್ಮ ಜತೆಗೆ ತಾವು ಸಾಕಿದ್ದ ಜಾನುವಾರು, ಕೋಳಿ, ಕುರಿ, ನಾಯಿ, ಬೆಕ್ಕುಗಳ ಸಮೇತ ಹೊರ ನಡೆದಿದ್ದು ವಿಶೇಷವಾಗಿತ್ತು.
ಗ್ರಾಮಸ್ಥರು ಹೊಲಗದ್ದೆ, ಗಿಡಮರಗಳ ಹಾಗೂ ಶಾಲೆಯ ಆವರಣದಲ್ಲಿ ಬೀಡುಬಿಟ್ಟು ದಿನ ಕಳೆದರು. ಸಂಜೆ 6ಕ್ಕೆ ಮರಿಯಮ್ಮನಹಳ್ಳಿ ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ದಿನದಮಟ್ಟಿಗೆ ಗುಳೆ ಹೋದ ಗ್ರಾಮಸ್ಥರು ಸಂಜೆ ಕಾಳಿಕಾದೇವಿ ಹಾಗೂ ಆಂಜನೇಯಸ್ವಾಮಿ ದೇವರ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ಹೊತ್ತು ಸಂಭ್ರಮಿಸಿದರು. ಬಳಿಕ ಅಗಸಿ ಬಾಗಿಲಗೆ ಪೂಜೆ ಸಲ್ಲಿಸಿ ಗ್ರಾಮವನ್ನು ಪ್ರವೇಶಿಸಿದರು.