ಹರಪನಹಳ್ಳಿ ಅಯ್ಯನಕೆರೆಗೆ ತ್ಯಾಜ್ಯ ಹಾಕಿದ್ದ ವ್ಯಕ್ತಿಯಿಂದಲೇ ಸ್ವಚ್ಛತೆ ಮಾಡಿಸುತ್ತಿರುವ ನಗರಸಭೆ ಪರಿಸರ ಅಭಿಯಂತರ ಅಮರೇಶ.
ಹರಪನಹಳ್ಳಿ: ನಗರದ ಅಯ್ಯನಕೆರೆಗೆ ತ್ಯಾಜ್ಯ ಎಸೆಯುತ್ತಿದ್ದ ಪಟ್ಟಣದ ನಿವಾಸಿ ನಸೀರ್ ಅವರಿಗೆ ನಗರಸಭೆಯಿಂದ 500 ರೂ. ದಂಡ ವಿಧಿಸಲಾಗಿದೆ.
ಅಯ್ಯನಕೆರೆಗೆ ಕೊಳೆತ ಹಣ್ಣು ಹಾಗೂ ತರಕಾರಿ ಸುರಿಯುತ್ತಿದ್ದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಕಸ ವಿಂಗಡಣೆ ಮೇಲ್ವಿಚಾರಕರು ಕಸ ಎಸೆದ ವ್ಯಕ್ತಿಯಿಂದಲೇ ತ್ಯಾಜ್ಯ ತೆರವು ಮಾಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ನಗರಸಭೆ ವಾಹನಗಳಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ಹಾಕಬೇಕು. ಸಾರ್ವಜನಿಕ ಸ್ಥಳ ಅಥವಾ ಕೆರೆಯಲ್ಲಿ ಕಸ ಹಾಕಿದರೆ ದಂಡ ಹಾಕುವುದರೊಂದಿಗೆ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.