ಪ್ರತಿ ಟನ್ ಕಬ್ಬಿಗೆ 3500 ರೂ. ನೀಡುವಂತೆ ಆಗ್ರಹಿಸಿ ಹೂವಿನಹಡಗಲಿ ತಾಲೂಕಿನ ಮೈಲಾರ ಶುಗರ್ಸ್ ಕಾರ್ಖಾನೆ ಬಳಿ ರೈತರು ಧರಣಿ ನಡೆಸಿದ್ದ ಸ್ಥಳದಲ್ಲಿ ಎಸಿ ಚಿದಾನಂದ ಗುರುಸ್ವಾಮಿ ಮಾತನಾಡಿದರು. ತಹಸೀಲ್ದಾರ್ ಸಂತೋಷ್ಕುಮಾರ್, ಡಿವೈಎಸ್ಪಿ ಮಂಜುನಾಥ, ರೈತರು ಇತರರಿದ್ದರು.
ಹೂವಿನಹಡಗಲಿ: ತಾಲೂಕಿನ ಮೈಲಾರ ಶುಗರ್ಸ್ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 2770 ರೂ. ನೀಡಲಿದೆ ಎಂದು ಎಸಿ ಚಿದಾನಂದ ಗುರುಸ್ವಾಮಿ ಹೇಳಿದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಬಂದ್ ಮಾಡಿ ಕಬ್ಬುಬೆಳೆಗಾರರು ಹಾಗೂ ವಿವಿಧ ರೈತ ಪರ ಸಂಘಟನೆಗಳು ನಡೆಸಿದ್ದ ಪ್ರತಿಭಟನೆ ಶನಿವಾರ ಸುಖಾಂತ್ಯ ಕಂಡಿತು.
ಪ್ರತಿ ಟನ್ ಕಬ್ಬಿಗೆ 3500 ರೂ. ನೀಡಬೇಕೆಂದು ಶುಕ್ರವಾರ ಪ್ರತಿಭಟನೆ ಆರಂಭಿಸಲಾಗಿತ್ತು. ಮೈಲಾರ ಶುಗರ್ಸ್ ಆಡಳಿತ ದರ ಪ್ರಕಟಿಸದ ಹಿನ್ನೆಲೆಯಲ್ಲಿ ಶನಿವಾರವೂ ಪ್ರತಿಭಟನೆ ಮುಂದುವರಿಸಲಾಗಿತ್ತು. ಸ್ಥಳಕ್ಕೆ ಎಸಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಮಂಜುನಾಥ, ತಹಸೀಲ್ದಾರ್ ಸಂತೋಷ್ಕುಮಾರ್ ಆಗಮಿಸಿ ರೈತರ ಮವೊಲಿಸಲು ಯತ್ನಿಸಿದರು. ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳು ಸಂಜೆವರೆಗೆ ಸಭೆ ನಡೆಸಿ ದರ ನಿಗದಿ ಮಾಡಿದರು. ಬೆಲೆ ನಿಗದಿಗಾಗಿ ಅಧಿಕಾರಿಗಳು, ಕಾರ್ಖಾನೆ ಮಾಲೀಕರು, ರೈತರ ನಡುವೆ ಹಗ್ಗ ಜಗ್ಗಾಟ ನಡೆಯಿತು.
ಕಾರ್ಖಾನೆ ಮಾಲೀಕ ರಾಘವೇಂದ್ರ ತಾರಿಕೊಪ್ಪ ಮಾತನಾಡಿ, ಜಿಒಇ ಪ್ರಕಾರ ನಾವು ರೈತರಿಗೆ ಹಣ ನೀಡುತ್ತೇವೆ. ಸರ್ಕಾರ ಆದೇಶದಂತೆ 9.5 ಇಳುವರಿಗೆ 2729 ರೂ. ನೀಡಲು ಸಿದ್ಧ. ಬೇರೆ ಕಾರ್ಖಾನೆಗಳಿಗಿಂತ ಹೆಚ್ಚು ಹಣ ನೀಡುತ್ತಿದ್ದೇವೆ. ರೈತರು ನಮ್ಮೊಂದಿಗೆ ಸಹಕರಿಸಬೇಕೆಂದರು.
ಇದಕ್ಕೆ ರೈತರು ಒಪ್ಪಿಗೆ ಸೂಚಿಸದ ಕಾರಣ ಎಸಿ ಚಿದಾನಂದ ಮಾತನಾಡಿ, ಸರ್ಕಾರದ ಆದೇಶದಂತೆ ಕಾರ್ಖಾನೆಯವರು ದರ ನೀಡಲು ಸಿದ್ಧರಿದ್ದಾರೆ. ಮೈಲಾರ ಶುಗರ್ಸ್ 9.35 ಇಳುವರಿ ಇದ್ದು, ಅದಕ್ಕೆ ತಕ್ಕಂತೆ ದರ ನೀಡುತ್ತಾರೆ. 2729 ರೂ. ನೀಡಲು ಒಪ್ಪಿಕೊಂಡಿದ್ದು, ಇನ್ನೂ ಹೆಚ್ಚಿನ ಬೆಲೆ ನೀಡಿ ನಾವು ಒತ್ತಡ ತಂದಾಗ 2762 ರೂ. ನೀಡಲು ಮುಂದಾಗಿದ್ದಾರೆ. ರೈತರು ಇದಕ್ಕೆ ಒಪ್ಪಿಕೊಂಡು ಕಾರ್ಖಾನೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ರೈತ ಅಶೋಕ ಬಳಗಾನೂರು ಮಾತನಾಡಿ, ಬೆಳಗಾವಿಯಲ್ಲಿ 10.25 ಇಳುವರಿ ಬರುವ ಕಬ್ಬುಗಳಿಗೆ 3200 ರೂ ನಿಗದಿ ಮಾಡಲಾಗಿದೆ. ನಾವೂ ಕೂಡ ಅದೇ ಕಬ್ಬನ್ನು ಬೆಳೆಯುತ್ತಿದ್ದು, ಅದರ ಪ್ರಕಾರ ಬೆಲೆ ನೀಡಬೇಕು. ಸರ್ಕಾರ ನಿಗದಿ ಮಾಡಿದ ದರವನ್ನೇ ನೀಡಲಿ ಎಂದು ಒತ್ತಾಯಿಸಿದರು.
ಕಾರ್ಖಾನೆ ಮಾಲೀಕ ರಾಘವೇಂದ್ರ ತಾರಿಕೊಪ್ಪ ಪ್ರತಿಕ್ರಿಯಿಸಿ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ದರ ನೀಡುತ್ತಿದ್ದು, ಇನ್ನೂ ಹೆಚ್ಚು ನೀಡಲಾಗುವುದಿಲ್ಲ. ಇಳುವರಿ ಬಗ್ಗೆ ರೈತರಲ್ಲಿ ಸಂಶಯವಿದ್ದರೆ ಪರಿಶೀಲಿಸಬಹುದು ಎಂದರು.
ರೈತ ಅಶೋಕ ಬಳಗಾನೂರು ಮಾತನಾಡಿ, 10.2 ಇಳುವರಿಗೆ 3200 ರೂ., 9.5 ಇಳುವರಿಗೆ 2965 ರೂ. ನೀಡಬೇಕೆಂದು ಸರ್ಕಾರ ನಿಗದಿಪಡಿಸಿದೆ. ಆದರೆ, ಕಾರ್ಖಾನೆಯವರು ಈ ಮೊತ್ತ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಭಾಗದ ರೈತರು ಬೆಳೆದ ಕಬ್ಬಿಗೆ 9.5 ಇಳುವರಿ ಬರುತ್ತಿದ್ದು, ಸರ್ಕಾರ ನಿಗದಿ ಮಾಡಿರುವ ಹಣ ನೀಡಬೇಕು ಎಂದು ಪಟ್ಟು ಹಿಡಿದರು.
ಎಸಿ ಚಿದಾನಂದ ಗುರುಸ್ವಾಮಿ ಮಾತನಾಡಿ, 2770 ರೂ. ನೀಡಲಿದ್ದು, ಪ್ರತಿಭಟನೆ ಕೈಬಿಡಬೇಕೆಂದರು. ಇದಕ್ಕೆ ಒಪ್ಪಿಗೆ ನೀಡಿದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.
ತಹಸೀಲ್ದಾರ್ ಸಂತೋಷ್ ಕುಮಾರ್, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ್, ಮಲ್ಲಿಕಾರ್ಜುನಗೌಡ, ಕೋಡಬಾಳ, ಹನುಮಂತಪ್ಪ, ಕೋಡಬಾಳ, ಚಂದ್ರಪ್ಪ, ಜಯಣ್ಣ ಗಡ್ಡಿಗೌಡ್ರು, ಗೋಣಿಗೌಡ, ಪ್ರಕಾಶ್, ಚಂದ್ರಪ್ಪ, ಎಚ್.ಜಿ.ಜಗ್ಗಿನ್, ಹಾವೇರಿ ಬಸವರಾಜ್, ಪ್ರಭಣ್ಣ, ಶಿವಣ್ಣ ಕೋಡಬಾಳ, ಬಸವರಾಜ್ ಎಂ., ಪುನೀತ್ ಇತರರಿದ್ದರು.