ಹೊಸಪೇಟೆಯಲ್ಲಿ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ರೌಡಿ ನಿಗ್ರಹ ದಳ ಕಾರ್ಯಚರಣೆ ನಡೆಸಿತು. ಡಿವೈಎಸ್ಪಿ ಮುರಳಿಧರ್, ಪಿಐ ಗೋವಿಂದ್ ಇತರರಿದ್ದರು.
- ಜಿಲ್ಲೆಯಲ್ಲಿ ರೌಡಿ ಅಸಾಮಿಗಳ ಮನೆಗಳ ಮೇಲೆ ಖಾಕಿ ಪಡೆ ದಿಢೀರ್ ದಾಳಿ
- ಹಬ್ಬಗಳ ಹಿನ್ನೆಲೆ ಖಡಕ್ ಎಚ್ಚರಿಕೆ
ಹೊಸಪೇಟೆ: ಜಿಲ್ಲೆಯಲ್ಲಿ ರೌಡಿಸಂ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಡಿಜಿ ಮತ್ತು ಐಜಿಪಿ ಸುತ್ತೋಲೆಯ ಆದೇಶದನ್ವಯ, ಜಿಲ್ಲೆಯ ಪ್ರತಿ ಉಪ ವಿಭಾಗದ ಮಟ್ಟದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ವೃತ್ತ ಮತ್ತು ಪೊಲೀಸ್ ಠಾಣಾ ಮಟ್ಟದಲ್ಲಿ ‘ರೌಡಿ ನಿಗ್ರಹ ದಳವನ್ನು ರಚಿಸಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಈ ದಳವು ಜಿಲ್ಲೆಯಾದ್ಯಂತ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಲು ತೀವ್ರ ನಿಗಾವಹಿಸಲಿದೆ.ರೌಡಿ ನಿಗ್ರಹ ದಳದ ಅಧಿಕಾರಿಗಳು ರೌಡಿಗಳ ಮೇಲೆ ನಿರಂತರ ನಿಗಾವಹಿಸಲಿದ್ದಾರೆ. ಅವರ ದೈನಂದಿನ ಒಡನಾಟ, ಆರ್ಥಿಕ ವಹಿವಾಟುಗಳು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳು ಹಾಗೂ ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಯಾರಾದರೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬAದಲ್ಲಿ ಅವರ ವಿರುದ್ಧ ಕಾನೂನು ಕ್ರಮ ನಡೆಸಲಾಗುವುದು.
ಪುನರಾವರ್ತಿತ ಅಪರಾಧಗಳಲ್ಲಿ ಭಾಗಿಯಾಗುವವರ ವಿರುದ್ಧ ಗುಂಡಾ ಕಾಯ್ದೆ, ಕೋಕಾ ಮತ್ತು ಗಡಿಪಾರು ನಂತಹ ಕಠಿಣ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಳೇ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಬಾಕಿ ಇರುವ ರೌಡಿ ಅಸಾಮಿಗಳು ಮತ್ತು ವಾರಂಟ್ ಬಾಕಿ ಇರುವವ ಬಗ್ಗೆ ನಿಗಾ ವಹಿಸಿ, ನ್ಯಾಯಾಲಯಕ್ಕೆ ಹಾಜರಾಗುವಂತೆ ದಳದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅಥವಾ ನಿಮ್ಮ ಸುತ್ತಮುತ್ತ ಯಾವುದೇ ರೀತಿಯ ರೌಡಿ ಚಟುವಟಿಕೆಗಳು, ಬೆದರಿಕೆ ಅಥವಾ ಕಾನೂನು ಬಾಹಿರ ಕೃತ್ಯಗಳು ಕಂಡುಬAದಲ್ಲಿ ತಕ್ಷಣವೇ ಇಲಾಖೆಯ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.