ಕೊಟ್ಟೂರಿನ ಚಿರಿಬಿ ಮಾರ್ಗದಲ್ಲಿ ಜನರು ತ್ಯಾಜ್ಯ ಎಸೆದಿರುವುದು.  
ವಿಜಯನಗರ

ರಸ್ತೆ ಬದಿ ತ್ಯಾಜ್ಯದಿಂದ ಸಮಸ್ಯೆ

ಅಶೋಕ್ ಕುಮಾರ್ ಎನ್
ಕೊಟ್ಟೂರು: ಪಟ್ಟಣದ ಚಿರಿಬಿ ಮಾರ್ಗದಲ್ಲಿ ರಾಜ ಕಾಲುವೆ ಹಾಗೂ ರಸ್ತೆ ಮೇಲೆ ಮನೆ ಹಾಗೂ ಚಿಕನ್ ಅಂಗಡಿಗಳ ತ್ಯಾಜ್ಯ ಸುರಿಯಲಾಗುತ್ತಿದೆ. ಕಾಲುವೆಯಲ್ಲಿ ತ್ಯಾಜ್ಯ ಹಾಕುತ್ತಿರುವುದರಿಂದ ನೀರು ಸರಾಗವಾಗಿ ಹರಿಯದೆ ಮಡುಗಟ್ಟಿ ಸೊಳ್ಳೆಗಳು ಹಾಗೂ ಕ್ರಿಮಿಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟು ದುರ್ನಾತ ಬೀರುತ್ತಿದೆ.
ಈ ಮಾರ್ಗದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂ ಸ್ಥಿತಿ ನಿರ್ಮಾಣವಾಗಿದೆ. ಕಸದ ಚೀಲವನ್ನು ರಸ್ತೆ ಪಕ್ಕದಲ್ಲಿಯೇ ಎಸೆಯುತ್ತಿರುವ ಕಾರಣ ಹಂದಿ, ನಾಯಿಗಳು ತ್ಯಾಜ್ಯವನ್ನು ರಸ್ತೆಗೆ ಎಳೆದು ತರುತ್ತಿವೆ. ಇದರಿಂದಾಗಿ ವಾಹನಗಳು ಅಪಘಾತಕ್ಕೀಡಾಗುವಂತಾಗಿದೆ. ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.