ಹೊಸಪೇಟೆಯಲ್ಲಿ ಮಳೆ ಸುರಿಯುತ್ತಿರುವ ವಾತಾವರಣ.
ಹೊಸಪೇಟೆ: ಕಳೆದ ಕೆಲವು ದಿನಗಳಿಂದ ಭೀಕರ ಸೆಕೆಯಿಂದ ಕಂಗಾಲಾಗಿದ್ದ ನಗರ ಸೇರಿದಂತೆ ಜಿಲ್ಲೆಯ ಜನತೆಗೆ ಭಾನುವಾರ ಸಂಜೆ ವರುಣದೇವ ತಂಪಾದ ವಾತವರಣ ತಂದಿದ್ದಾನೆ. ನಗರದಾದ್ಯಂತ ದಿಢೀರ್ ಧಾರಾಕಾರ ಮಳೆ ಸುರಿದಿದ್ದು, ಸುಡು ಬಿಸಿಲಿನಿಂದ ಬೆಂದು ಹೋಗಿದ್ದ ಸರ‍್ವಜನಿಕರು ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆಯಿಂದಾಗಿ ವಾತಾವರಣವೇನೋ ತಂಪಾಗಿದೆ, ಆದರೆ, ನಗರದ ಮೂಲಸೌರ‍್ಯಗಳ ಕೊರತೆ ಮತ್ತೆ ಎದ್ದು ಕಾಣಿಸಿದೆ. ಪ್ರಮುಖ ರಸ್ತೆಗಳು ಹಾಗೂ ನಾನಾ ಬಡಾವಣೆಗಳಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗಲು ಜಾಗವಿಲ್ಲದೆ ರಸ್ತೆಗಳಲ್ಲೇ ನದಿಯಂತೆ ಹರಿದಿದೆ. ನಗರದ ನಾನಾ ಕಡೆ ರಸ್ತೆಗಳು ಕೆರೆಯಂತಾಗಿ ಮರ‍್ಪಟ್ಟಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು. ದಿಢೀರ್ ನೀರು ನಿಂತಿದ್ದರಿಂದ ವಾಹನಗಳು ನಿಧಾನವಾಗಿ ಚಲಿಸುವಂತಾಗಿ, ಕೆಲವು ಕಡೆ ವಾಹನ ದಟ್ಟಣೆ ಉಂಟಾಯಿತು. ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದ ನಡುವೆಯೂ, ವರುಣನ ಈ ದಿಢೀರ್ ಎಂಟ್ರಿಯಿಂದ ಜನತೆಗೆ ತಂಪು ಹಾಗೂ ಸಂತಸದ ಅಲೆಯನ್ನು ತಂದಿರುವುದಂತೂ ಸುಳ್ಳಲ್ಲ.