ಕೊಟ್ಟೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಜಿ.ಕೆ.ಅಮರೇಶ ಅಧ್ಯಕ್ಷತೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ನಡೆಯಿತು.
ಕೊಟ್ಟೂರು: ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಡೊನೇಷನ್ ಕಡಿಮೆ ಮಾಡುವುದಾಗಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಭರವಸೆ ನೀಡಿದವು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಜಿ.ಕೆ.ಅಮರೇಶ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಪಿ.ಶ್ರೀಧರ ಶೆಟ್ಟಿ ಬುಧವಾರ ಈ ಕುರಿತ ಭರವಸೆ ನೀಡಿದವು.
ಬಿಇಒ ಮೈಲೇಶ ಬೇವೂರು ಮಾತನಾಡಿ, ಎಷ್ಟು ಡೊನೇಷನ್ ಕಡಿಮೆ ಮಾಡಬೇಕು ಎಂಬುದನ್ನು ಪ್ರಗತಿಪರ ಸಂಘಟನೆಗಳು ತಿಳಿಸಬೇಕು ಎಂದರು. ವಕೀಲ ಹನುಮಂತಪ್ಪ ಮಾತನಾಡಿ, ಪಾಲಕರಿಗೆ ಹೊರೆಯಾಗದಂತೆ ಕಡಿಮೆ ಮಾಡಬೇಕೆಂದು ಕೋರಿದರು. ರೈತ ಸಂಘದ ಜಯಪ್ರಕಾಶ್ ನಾಯ್ಕ ಮಾತನಾಡಿ, ಡೊನೇಷನ್ ಜತೆಗೆ ಶಾಲಾಭಿವೃದ್ಧಿ ಶುಲ್ಕ ಎಂದು ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ನಿಯಮಗಳಲ್ಲಿ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ದಲಿತ ಸಂಘಟನೆ ಪ್ರಮುಖ ಬದ್ದಿ ದುರುಗೇಶ ಮಾತನಾಡಿ, ಪ್ರವೇಶ ಪಡೆದ ಬಳಿಕ ಕಾರಣಾಂತರದಿಂದ ಶಾಲೆ ತ್ಯಜಿಸಿದರೆ ಪಾಲಕರಿಗೆ ಡೊನೇಷನ್ ವಾಪಸ್ ಕೊಡಬೇಕೆಂದು ಒತ್ತಾಯಿಸಿದರು. ಬಿಇಒ ಮೈಲೇಶ್ ಬೇವೂರು ಮಾತನಾಡಿ, ಶಾಲೆ ಬಿಟ್ಟವರಿಗೆ ನೆಪ ಹೇಳದೆ ಡೊನೇಷನ್ ಹಿಂದಿರುಗಿಸಬೇಕೆಂದು ತಾಕೀತು ಮಾಡಿದರು.
ಸಿಪಿಐ ದುರುಗಪ್ಪ, ಪಿಎಸ್‌ಐ ಗೀತಾಂಜಲಿ ಶಿಂಧೆ, ಪ್ರಮುಖರಾದ ಕೊಚಾಲಿ ಮಂಜುನಾಥ, ಹರಾಳು ದೊಡ್ಡಬಸಪ್ಪ, ಬಳಿಗನೂರು ಬಾಲ ಗಂಗಾಧರ, ಐನ್ನಳ್ಳಿ ದೊಡ್ಡ ಹಾಲಯ್ಯ, ಬೋರನಹಳ್ಳಿ ಹಾಲಪ್ಪ, ರಾಮನಗೌಡ, ಮಾಬು ಸಾಹೇಬ್, ಕೊಲ್ಲಾರಪ್ಪ, ಮಣಿಕಂಠ, ಪಿ.ಚಂದ್ರಶೇಖರ, ಮಲ್ಲನಾಯಕನಹಳ್ಳಿ ಮಂಜು, ಗುರುಬಸವರಾಜ, ಬದ್ದಿ ಮರಿಸ್ವಾಮಿ, ಗುಡಿ ಮಲ್ಲಿಕಾರ್ಜುನ, ದೊಡ್ಡಬಸಪ್ಪ ಇತರರಿದ್ದರು.