ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿಕಲಚೇತನರ ಕುಂದು ಕೊರತೆ ಸಭೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್ ಇದ್ದರು.
ಹೊಸಪೇಟೆ: ಅಂಗವಿಕಲರನ್ನು ಮುಖ್ಯವಾಹಿನಿಗೆ ಬರಲು ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಅವರ ಕುಂದುಕೊರತೆಗಳಿಗೆ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗವಿಕಲರಿಗೆ ಸರ್ಕಾರದಿಂದ ಸಿಗಬೇಕಾದ ಮಾಸಾಶನ, ಸಾಧನ ಸಲಕರಣೆಗಳು ಹಾಗೂ ಬಸ್ ಪಾಸ್ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಿರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೂಚಿಸಲಾಯಿತು. ವಿವಿಧ ಇಲಾಖೆಗಳಲ್ಲಿ ತಮಗೆ ಸಿಗಬೇಕಾದ ಸೌಲಭ್ಯ, ಸಾಧನ ಸಲಕರಣೆ ಸಕಾಲದಲ್ಲಿ ದೊರೆಯದೇ ಹಲವು ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.