ಕೂಡ್ಲಿಗಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ಯೋಗೇಶ್ ಚಾಲನೆ ನೀಡಿದರು.  
ವಿಜಯನಗರ

ಅಂಗವಿಕಲರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಕೂಡ್ಲಿಗಿ: ಅಂಗವಿಕಲರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಅಂಗವಿಕಲರ ಬಗ್ಗೆ ಅನುಕಂಪ ತೋರಿಸದೆ ಅವರಲ್ಲಿ ಮನೋಸ್ಥೈರ್ಯ ತುಂಬಿ ಮುನ್ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ ಹಾಗೂ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಅಂಗವಿಕಲರು ಸ್ವಾವಲಂಬಿಯಾಗಿ ಬದುಕು ಸಾಗಿಸಲು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಅಂಗವಿಕಲರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇವರು ಕೊಟ್ಟ ಅತೀಂದ್ರಿಯ ಶಕ್ತಿಯನ್ನು ಉಪಯೋಗಿಸಿಕೊಂಡು ಅಂಗವಿಕಲರು ಸಾಧನೆ ಮಾಡಿದ್ದಾರೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಯಾಗಿ ಬದುಕು ನಿರ್ವಹಿಸಬೇಕು ಎಂದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮಾತನಾಡಿ, ಅಂಗವಿಕಲರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಮಾಜದಲ್ಲಿ ಅವರನ್ನು ಗೌರವದಿಂದ ಕಾಣಬೇಕು ಎನ್ನುವ ಉದ್ದೇಶದಿಂದ ದಿನ ಆಚರಿಸಲಾಗುತ್ತಿದೆ. ಅಂಗವಿಕಲರ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಇತರರೊಂದಿಗೆ ಸಮಾನವಾಗಿ ಬದುಕುವಂತೆ ನೋಡಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶೆ ಸಿ.ಮಹಾಲಕ್ಷ್ಮೀ, ಅಪರ ಸರ್ಕಾರಿ ವಕೀಲ ಕೆ.ಜಿ.ಶಿವಪ್ರಸಾದ್, ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ, ತಾಪಂ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನ, ಕಾರ್ಯದರ್ಶಿ ಸಿ.ವಿರೂಪಾಕ್ಷಪ್ಪ, ಜಂಟಿ ಕಾರ್ಯದರ್ಶಿ ಡಿ.ಎಚ್.ದುರುಗೇಶ್, ತಾಲೂಕು ಆರೋಗ್ಯಾಧಿಕಾರಿ ಎಸ್.ಪಿ.ಪ್ರಕಾಶ್, ಸಿಡಿಪಿಒ ಮಾಲುಂಬಿ, ಪ್ರಮುಖರಾದ ಲಕ್ಷ್ಮೀದೇವಿ, ಎನ್.ಚೌಡಪ್ಪ, ಎನ್.ಬಸವರಾಜ ಇತರರಿದ್ದರು.