ಕನ್ನಡ ವಿವಿಯಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ಯ ಆಯೋಜಿಸಿದ ಮೂರು ದಿನಗಳ ಕಾರ್ಯಾಗಾರವನ್ನು ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಉದ್ಘಾಟಿಸಿದರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ.ಸೋಮಶೇಖರ್ ಇದ್ದರು. 
ವಿಜಯನಗರ

ಓದುವ ಹವ್ಯಾಸ ಪತ್ರಕರ್ತನ ಬುನಾದಿ

ಪ್ರಮುಖ ಮುಖ್ಯಾಂಶಗಳು

  • ಕನ್ನಟ ವಿವಿಯಲ್ಲಿ ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಅಭಿಪ್ರಾಯ
ಹೊಸಪೇಟೆ: ಪತ್ರಕರ್ತರಿಗೆ ಎಲ್ಲ ವಿಷಯಗಳ ಸಂಪೂರ್ಣ ಜ್ಞಾನವಿರುವುದಿಲ್ಲ, ಆದರೆ ನಿರಂತರ ಅಧ್ಯಯನ ಮತ್ತು ಮಾಹಿತಿ ಸಂಗ್ರಹದಿAದ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು ಎಂದು ಹಿರಿಯ ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಹೇಳಿದರು.
ಕನ್ನಡ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪತ್ರಿಕಾ ದಿನಾಚರಣೆ ನಿಮಿತ್ಯ ಆಯೋಜಿಸಿದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಓದುವ ಹವ್ಯಾಸವು ಪತ್ರಕರ್ತನ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲನೆ ಇಲ್ಲದೆ ಮಾಹಿತಿ ಪ್ರಕಟಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಭಾಷೆಯ ಮೇಲಿನ ಹಿಡಿತ ಪತ್ರಕರ್ತನ ಪ್ರಮುಖ ಶಕ್ತಿಯಾಗಿದ್ದು, ವೈಯಕ್ತಿಕ ಅಭಿಪ್ರಾಯಗಳನ್ನು ಜನರ ಮೇಲೆ ಹೇರದೆ, ವಾಸ್ತವಾಂಶಗಳನ್ನು ಮಾತ್ರ ಮುಂದಿಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ" ಎಂದು ಕಿವಿಮಾತು ಹೇಳಿದರು.
ವಿವಿ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಸುದ್ದಿ ವರದಿಯೊಂದಿಗೆ ಲೇಖನ, ಪ್ರವಾಸ ಕಥನಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡುತ್ತಿದ್ದಾರೆ. ಭವಿಷ್ಯದ ಪತ್ರಕರ್ತರು ಯಾವುದೇ ಆಮಿಷಗಳಿಗೆ ಒಳಗಾಗದೆ, ಸತ್ಯ ಮತ್ತು ನೈತಿಕತೆಯನ್ನು ಪಾಲಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಅವರಿಗೆ ನ್ಯಾಯ ದೊರಕಿಸಿಕೊಡುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ.ಸೋಮಶೇಖರ್, ಅಧ್ಯಾಪಕರಾದ ಡಾ.ಎಸ್.ಕೆ.ಲೋಕೇಶ್, ಡಾ.ಟಿ.ಎಸ್.ಗೊರವರ ಇದ್ದರು.