- ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯ
ಹೊಸಪೇಟೆ: ಜಗತ್ತಿನಲ್ಲೇ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಶಾಸಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಧರ್ಮದಲ್ಲಿ ನಾಲ್ಕೈದು ಮದುವೆ ಆಗುವ ಅವಕಾಶವಿದೆ. ಬಹುಶಃ ಅದೇ ಆಸೆಯಿಂದ ಅಥವಾ ಸತ್ತ ಮೇಲೆ ಸ್ವರ್ಗದಲ್ಲಿ ಕನ್ಯೆಯರು ಸಿಗುತ್ತಾರೆ ಎಂಬ ದುರಾಸೆಯಿಂದ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಎಂದಿರಬಹುದು ಎಂದು ಲೇವಡಿ ಮಾಡಿದರು.
ಇಸ್ಲಾಂ, ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮಗಳು ವ್ಯಕ್ತಿಗಳಿಂದ ಸ್ಥಾಪಿತವಾದ ಮತಗಳು ಮಾತ್ರ. ಆದರೆ ಆದಿ ಮತ್ತು ಅಂತ್ಯವಿಲ್ಲದ ಸನಾತನ ಧರ್ಮ ಮಾತ್ರ ಜಗತ್ತಿನಲ್ಲೇ ಶ್ರೇಷ್ಠ. ಸನಾತನ ಧರ್ಮವನ್ನು ನಾಶ ಮಾಡಲು ಬಂದವರೇ ಸರ್ವನಾಶವಾಗಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದಲ್ಲಿ ಮುಸ್ಲಿಂ ಧರ್ಮದಲ್ಲಿ ಮಹಿಳೆಯರ ಶೋಷಣೆ ಮತ್ತು ಬುರ್ಖಾ ಪದ್ಧತಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಅರ್ಧಂಬರ್ಧ ತಿಳಿದಿರುವ ರಾಹುಲ್ ಗಾಂಧಿ ಎಡಬಿಡಂಗಿ ತರಹ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಜಾಗತಿಕ ಭಯೋತ್ಪಾದನೆಗೆ ಇಸ್ಲಾಂ ಮೂಲಭೂತವಾದಿ ಚಿಂತನೆಗಳೇ ಕಾರಣ ಎಂದು ಗೂಗಲ್ ಸರ್ಚ್ ಮಾಡಿದರೂ ತಿಳಿಯುತ್ತದೆ. ಸತ್ಯ ಹೇಳಿದರೆ ಭಯೋತ್ಪಾದಕರು ಕೊಂದುಬಿಡುತ್ತಾರೆ ಎಂಬ ಭಯದಿಂದ ಅಥವಾ ಸುಳ್ಳು ಹೇಳಿದರೆ ತನ್ನನ್ನು ಬಿಡುತ್ತಾರೆ ಎಂಬ ಕಾರಣಕ್ಕೆ ರಾಯರೆಡ್ಡಿ ಈ ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.