ಹಂಪಿ ಕಮಲ್ ಮಹಲ್ ಬಳಿ ರಾಹುಲ್ ದ್ರಾವಿಡ್ ಸ್ಮಾರಕಗಳ ವೀಕ್ಷಣೆ ಮಾಡಿದರು. ಪತ್ನಿ ಡಾ. ವಿಜೇತಾ ಪೆಂಡಾರ್ಕರ್ ಕೂಡ ಇದ್ದರು. 
ವಿಜಯನಗರ

ಹಂಪಿಗೆ ರಾಹುಲ್ ದ್ರಾವಿಡ್ ಭೇಟಿ

ಮಂಜುನಾಥ
ಹೊಸಪೇಟೆ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕೋಚ್, ದ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.
ಬುಧವಾರ ಬೆಳಿಗ್ಗೆ ಹಂಪಿಗೆ ಆಗಮಿಸಿದ ದ್ರಾವಿಡ್, ಮೊದಲಿಗೆ ಸಾಸಿವೆಕಾಳು ಗಣೇಶ ಮತ್ತು ಹೇಮಕೂಟ ಬೆಟ್ಟಕ್ಕೆ ಭೇಟಿ ನೀಡಿದರು. ನಂತರ ವಿರೂಪಾಕ್ಷೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಳಿಕ ಕೃಷ್ಣ ದೇಗುಲ, ಉಗ್ರನರಸಿಂಹ ಮತ್ತು ಬಡವಿಲಿಂಗ ದೇಗುಲಗಳಿಗೆ ಭೇಟಿ ನೀಡಿ ಶಿಲ್ಪಕಲೆಗಳನ್ನು ಕಣ್ತುಂಬಿಕೊAಡರು. ಮಧ್ಯಾಹ್ನದ ಅವಧಿಯಲ್ಲಿ ಅವರು ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಯಂತ್ರೋದ್ಧಾರಕ ಆಂಜನೇಯ ಮತ್ತು ಅಚ್ಯುತರಾಯ ದೇಗುಲಗಳನ್ನು ಸಂದರ್ಶಿಸಿದರು.
ತಮ್ಮ ಪ್ರವಾಸದ ಎರಡನೇ ದಿನವಾದ ಗುರುವಾರ ಬೆಳಿಗ್ಗೆ, ಹಂಪಿಯ ಕಲಾ ವೈಭವದ ಪ್ರತೀಕವಾದ ವಿಜಯವಿಠ್ಠಲ ದೇಗುಲ ಹಾಗೂ ಕಮಲ ಮಹಲ್ ಗೆ ದ್ರಾವಿಡ್ ಭೇಟಿ ನೀಡಿದರು. ದೇಗುಲದ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅವರು ಆಸಕ್ತಿಯಿಂದ ಮಾಹಿತಿ ಪಡೆದರು. ಈ ವೇಳೆ ದ್ರಾವಿಡ್ ಅವರನ್ನು ಕಂಡ ಸ್ಥಳೀಯರು ಮತ್ತು ಪ್ರವಾಸಿಗರು ಉತ್ಸಾಹದಿಂದ ಫೋಟೋ ಕ್ಲಿಕ್ಕಿಸಿಕೊಂಡರು. ದ್ರಾವಿಡ್ ಅವರ ಹಂಪಿ ಭೇಟಿಯು ಪ್ರವಾಸಿ ವಲಯದಲ್ಲಿ ಸಂಚಲನ ಮೂಡಿಸಿತು.