ಹೊಸಪೇಟೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ದ್ವೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ, ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ, ಶೃತಿ ತೇಲಿ, ಶರದಿ ರಾಜ್ ಇತರರಿದ್ದರು.
- ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಸೂಚನೆ
ಹೊಸಪೇಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಮಕ್ಕಳ ಭಿಕ್ಷಾಟನೆಯಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ದ್ವೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಸ್ತೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವವರ ವಿರುದ್ಧ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಬೇಕು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸಿ ಬಾಲ ಮಂದಿರಗಳಿಗೆ ಸೇರಿಸುವಂತೆ ಸೂಚಿಸಿದರು. ಸಾರ್ವಜನಿಕರು ಇಂತಹ ದೃಶ್ಯಗಳು ಕಂಡುಬAದಲ್ಲಿ 1098 ಅಥವಾ 112 ಸಹಾಯವಾಣಿಗೆ ಕರೆ ಮಾಡುವಂತೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಸಂಬAಧಪಟ್ಟ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಜಾಗೃತಿ ಮೂಡಿಸಬೇಕು. ಜತೆಗೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ಮನೆ-ಮನೆ ಸಮೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿದರು. ಕಂದಾಯ ಇಲಾಖೆಯ ವಿರುದ್ಧ ಬರುತ್ತಿರುವ ಜಮೀನು ಸರ್ವೇ, ಹದ್ದುಬಸ್ತು ಮತ್ತು ಪೋಡಿ ಸಂಬAಧಿತ ದೂರುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕರನ್ನು ಅಲೆದಾಡಿಸದೆ ತಳಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ, ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ, ಶೃತಿ ತೇಲಿ, ಶರದಿ ರಾಜ್, ಎಎಸ್ಪಿ ಮಂಜುನಾಥ್, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ವೈ ಕಾಳೆ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಗುಜ್ಜಲ ನಾಗರಾಜ್ ಇತರರಿದ್ದರು.
ಜು. 11ರಂದು ಲೋಕ ಅದಾಲತ್
ನ್ಯಾಯಾಲಯದಲ್ಲಿ ಬಾಕಿ ಇರುವ 4 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಗುರಿಯೊಂದಿಗೆ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.