ಕಾಳಸಂತೆಯಲ್ಲಿ ಪಡಿತರ ಮಾರಾಟ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೂಡ್ಲಿಗಿ ತಹಸೀಲ್ದಾರ್ ವಿ. ಕೆ.ನೇತ್ರಾವತಿಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.  
ವಿಜಯನಗರ

ಫಲಾನುಭವಿಗಳಿಗೆ ಸೌಲಭ್ಯ ಸಮರ್ಪಕ ತಲುಪಿಸಿ

ಅಶೋಕ್ ಕುಮಾರ್ ಎನ್
ಕೂಡ್ಲಿಗಿ: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಹಾಗೂ ಹೊಸ ಪಡಿತರ ಚೀಟಿ ನೀಡುವಲ್ಲಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಸೋಮವಾರ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್ ಮಾತನಾಡಿ, ತಾಲೂಕಿನ ಕೆಲವು ಗ್ರಾಮಗಳಲ್ಲಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದರಿಂದಾಗಿ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ದೊರೆಯದೆ ತೊಂದರೆ ಆಗುತ್ತಿದೆ ಎಂದು ದೂರಿದರು.
ಹೊಸ ಪಡಿತರ ಚೀಟಿ, ತಿದ್ದುಪಡಿ, ಹೆಸರು ಸೇರ್ಪಡೆ ಹಾಗೂ ಇತರ ಕೆಲಸಗಳಿಗಾಗಿ ಕೆಲ ಮಧ್ಯವರ್ತಿಗಳು ಮತ್ತು ಸಂಬಂಧಪಟ್ಟ ಇಲಾಖೆ ಕೆಲ ಸಿಬ್ಬಂದಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದರಿಂದಾಗಿ ಬಡವರು ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು. ಪಡಿತರ ಅಂಗಡಿಗಳಲ್ಲಿ ನಿಯಮಿತ ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ಸೂರ್ಯಪಾಪಣ್ಣ, ಓಬಳೇಶ, ಎನ್.ನಾಗಜ್ಜ, ಲಕ್ಷ್ಮೀದೇವಿ, ಕಾನಮಡಿ ತಿಪ್ಪೇಸ್ವಾಮಿ, ಮಹೇಶ, ಶ್ರೀಧರ, ಅಜ್ಜನಗೌಡ, ಮರಬ ನಾಗರಾಜ್, ಬಿ.ಡಿ.ಓಬಣ್ಣ, ಕೆ.ಶೇಷಪ್ಪ, ಅರ್ಜುನ, ಶಿವಕುಮಾರ್, ರೇವಣ್ಣ, ಚಿಕ್ಕಪ್ಪ, ನಿಂಗಪ್ಪ, ನಂದಿ ದೊಡ್ಡಪ್ಪ ಇದ್ದರು.