ಎಮ್ಮಿನಗೂರಿನಲ್ಲಿ ಜೋಳ ಖರೀದಿ ಕೇಂದ್ರಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪ್ರಮುಖರಾದ ಬಿ.ಖಾಸಿಂಸಾಬ್, ಇ.ಜಡೇಶರೆಡ್ಡಿ, ಬಿ.ಸದಾಶಿವಪ್ಪ, ಬಿ.ವಿ.ಗೌಡ, ಕೆ.ಶ್ರೀನಿವಾಸರಾವ್ ಇತರರಿದ್ದರು.
ಕಂಪ್ಲಿ: ಎಮ್ಮಿಗನೂರು ಎಪಿಎಂಸಿ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ, ಜೋಳ ಖರೀದಿ ಕೇಂದ್ರ ಆರಂಭಕ್ಕೆ ಶಾಸಕ ಜೆ.ಎನ್.ಗಣೇಶ್ ಶನಿವಾರ ಚಾಲನೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಇ.ಜಡೇಶರೆಡ್ಡಿ ಮಾತನಾಡಿ 1,280ರೈತರಿಂದ 59ಸಾವಿರ ಕ್ವಿಂಟಾಲ್ ಜೋಳ ಖರೀದಿಸಲಾಗುವುದು. ನೋಂದಣಿ ಪಟ್ಟಿಯಂತೆ ಜೋಳ ಖರೀದಿಸಲಾಗುವುದು. ರೈತರು ಗುಣಮಟ್ಟದ ಜೋಳ ನೀಡಬೇಕು. ಜೋಳದ ಚೀಲಗಳಿಗೆ 11ಹೊಲಿಗೆ, ನಂಬರ್ ಹಾಕುವುದು ಸೇರಿ ಕ್ವಿಂಟಾಲ್‌ಗೆ ಹಮಾಲಿ ದರ 28ರೂ.ತೀರ್ಮಾನಿಸಿದೆ. ಜಿಲ್ಲಾಧಿಕಾರಿ ಹೆಚ್ಚಿನ ದರ ನೀಡಿದಲ್ಲಿ ವಿತರಿಸಲಾಗುವುದು ಎಂದರು.
ರೈತ ಸಂಘದ ಕಾರ್ಯಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಅಧ್ಯಕ್ಷ ವಿ.ವೀರೇಶ ಮಾತನಾಡಿ, ಜೋಳ ಬೆಳೆದ ರೈತರು ಒಗ್ಗಟ್ಟಾಗಿ 20ಕ್ವಿಂಟಾಲ್ ಕೊಳ್ಳುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕಿದೆ. ಮುಂದಿನ ಬಾರಿ 25ಕ್ವಿಂಟಾಲ್ ಜೋಳ ಖರೀದಿಗೆ ಆಗ್ರಹಿಸಲಾಗುವುದು ಎಂದರು.
ರೈತರು ಎಕರೆಗೆ 15ಕ್ವಿಂಟಾಲ್ ಬದಲಿಗೆ 20ಕ್ವಿಂಟಾಲ್ ಜೋಳ ಖರೀದಿಸಬೇಕು. ಖರೀದಿ ಕೇಂದ್ರ ಆರಂಭ ವಿಳಂಬದಿಂದ ಜೋಳ ಸಂಗ್ರಹಿಸುವ ಹೊಣೆ ಹೆಚ್ಚುತ್ತದೆ. ಹುಳು ಬಾಧೆ ಹೆಚ್ಚಾಗುತ್ತದೆ. ಮಳೆ, ಪ್ರಾಕೃತಿಕ ತೊಂದರೆಗಳಿಂದ ಜೋಳ ಹಾಳಾಗುತ್ತದೆ. ಇದಕ್ಕಾಗಿ ಜೋಳ ಕೊಯ್ಲದ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.
ಹಮಾಲಿ ದರ ಕ್ವಿಂಟಲ್‌ಗೆ 32ರೂ. ನೀಡುವಂತೆ ಹಮಾಲರು ಒತ್ತಾಯಿಸಿದ ಸಮಯದಲ್ಲಿ ರೈತರು ಹಮಾಲರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಶಾಸಕರು ಭರವಸೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಖಾಸಿಂಸಾಬ್, ಪ್ರಮುಖರಾದ ಬಿ.ಮಹೇಶಗೌಡ, ಬಿ.ಸದಾಶಿವಪ್ಪ, ಪ್ರವೀಣ, ವೈ.ರಾಘವೇಂದ್ರರೆಡ್ಡಿ, ಅಶ್ವತ್ಥರೆಡ್ಡಿ, ರೈತ ಸಂಘದ ಪದಾಧಿಕಾರಿಗಳಾದ ಕೊಟ್ಟೂರು ರಮೇಶ, ಮುರಾರಿ, ಜಡೆಪ್ಪ ಇತರರಿದ್ದರು.