ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಪೂರ್ವಸಿದ್ಧತಾ ಸಭೆ ನಡೆಸಿದರು. ಎಎಸ್ಪಿ ಮಂಜುನಾಥ, ಜಿಲ್ಲಾ ಆಯುಷ್ ಇಲಾಖೆ ಡಾ.ಫಣೀಂದರ್, ವೈದ್ಯಾಧಿಕಾರಿ ಗುರುಬಸವರಾಜ್ ಇತರರಿದ್ದರು.
- ವಿಶ್ವ ಯೋಗ ದಿನಾಚರಣೆ ಪೂರ್ವಸಿದ್ಧತಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ
ಹೊಸಪೇಟೆ: ಅಂತರರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಜೂ.21 ರಂದು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಯೋಗವು ಕೇವಲ ಒಂದು ದಿನದ ಆಚರಣೆಯಾಗದೆ, ಪ್ರತಿಯೊಬ್ಬರ ಜೀವನಶೈಲಿಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ಗ್ರಾಮೀಣ ಮಟ್ಟದಲ್ಲೂ ಯೋಗ ದಿನವನ್ನು ಯಶಸ್ವಿಗೊಳಿಸಲು ಆಯುಷ್ ಇಲಾಖೆ ಮತ್ತು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅದಲ್ಲದೇ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಆಹ್ವಾನಿಸಬೇಕು ಎಂದು ತಿಳಿಸಿದರು.
ಯೋಗ ದಿನಾಚರಣೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಸ್ಥಳದಲ್ಲಿ ಮೂಲಸೌಕರ್ಯ, ಕುಡಿವ ನೀರು, ಸ್ವಚ್ಛತೆ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಹಾಗೆಯೇ ನಗರಸಭೆ ವಾಹನಗಳಲ್ಲಿ ಯೋಗ ದಿನಾಚರಣೆಯ ಕುರಿತು ಜಿಂಗಲ್ಸ್ ಹಾಕುವ ಮೂಲಕ ಮತ್ತಷ್ಟು ವ್ಯಾಪಕ ಪ್ರಚಾರ ನೀಡಬೇಕು. ಯೋಗ ದಿನಾಚರಣೆಗೆ ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸಿ ಯೋಗ ದಿನಾಚರಣೆ ಯಶಸ್ವಿಗೊಳಿಸಬೇಕು ಎಂದರು.
ಯೋಗ ದಿನಾಚರಣೆ ನಿಮಿತ್ತ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಹಾಗೂ ಯೋಗ ದಿನಾಚರಣೆಯ ಮಹತ್ವ ಸಾರಲು ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬೈಕ್ ರ್ಯಾಲಿಯು 19ರಂದು ಬೆಳಗ್ಗೆ 6.30ಕ್ಕೆ ಫ್ರೀಡಂ ಪಾರ್ಕ್ ಮೈದಾನದಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.