ಗುಡೇಕೋಟೆಯಲ್ಲಿ ನಡೆಯುವ ಒನಕೆ ಓಬವ್ವ ಉತ್ಸವದ ವೇದಿಕೆ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. 
ವಿಜಯನಗರ

ಓಬವ್ವ ಉತ್ಸವ ನಾಡ ಹಬ್ಬವಾಗಿ ಆಚರಿಸಲು ಸಿದ್ಧತೆ

ಕಾನಹೊಸಹಳ್ಳಿ: ಒನಕೆ ಓಬವ್ವ ಉತ್ಸವ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಗುಡೇಕೋಟೆಯಲ್ಲಿ ಜ.31 ಹಾಗೂ ಫೆ.1ರಂದು ನಡೆಯುವ ಒನಕೆ ಓಬವ್ವ ಉತ್ಸವದ ಮುಖ್ಯವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಪಾಳೇಗಾರರ ನೆಲ, ಒನಕೆ ಓಬವ್ವನ ತವರು ನೆಲದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ಸವ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯೊಂದಿಗೆ ಮೊಳಕಾಲ್ಮೂರು ರಸ್ತೆಯಲ್ಲಿನ ಗುಡ್ಡದ ಸಮೀಪದ ದೊಡ್ಡ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ನಾಡಹಬ್ಬದಂತೆ ಉತ್ಸವ ಆಚರಿಸಲು 1.50 ಕೋಟಿ ರೂ. ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಿಂದಲೂ ಉತ್ಸವಕ್ಕೆ ಜನರು ಸೇರುವ ನಿರೀಕ್ಷೆಯಿದೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ವಿದ್ಯುತ್ ದೀಪಗಳ ಅಲಂಕಾರಕ್ಕೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ಒನಕೆ ಓಬವ್ವ ಇತಿಹಾಸ, ಪಾಳೇಗಾರರ ಆಳ್ವಿಕೆಯ ಗತವೈಭವ ಮೆಲುಕು ಹಾಕುವಂಥ ಈ ಕಾರ್ಯಕ್ರಮ ಯಶಸ್ವಿಯಾಗಲು ಜನಪ್ರತಿನಿಧಿಗಳು, ಅಧಿಕಾರಿಗಳು, ಪ್ರಮುಖರು ಶ್ರಮಿಸಬೇಕಾಗಿದೆ ಎಂದು ಕೋರಿದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಬಿಇಒ ಮೈಲೇಶ್ ಬೇವೂರು, ಪಿಡಿಒ ಬಸಮ್ಮ, ಪ್ರಮುಖರಾದ ರಾಘವೇಂದ್ರ ರಾವ್, ಶಿವಪ್ರಸಾದ ಗೌಡ್ರು, ವಿಶಾಲಾಕ್ಷಿ ರಾಜಣ್ಣ, ಶಿವರಾಜ ವರ್ಮ ದೊರೆ, ತಾಪಂ ನಿವೃತ್ತ ಇಒ ಜಿ.ಎಂ.ಬಸಣ್ಣ, ಎಚ್.ನಾಗೇಂದ್ರಪ್ಪ, ಪೇಂಟ್ ತಿಪ್ಪೇಸ್ವಾಮಿ, ಉಪನ್ಯಾಸಕ ನಾಗರಾಜ ಕೊಟ್ರಪ್ಪನವರ್, ಜೆ.ಶಿವಕುಮಾರ್, ನಿಂಗಣ್ಣ, ಓಬಣ್ಣ, ಬೊಮ್ಮಣ್ಣ, ಮಂಜಣ್ಣ, ಜಿಲಾನ್ ಬಾಷಾ, ಮೋಟ್ ಪಾಲಣ್ಣ, ರಾಜಣ್ಣ ಇತರರಿದ್ದರು.