- ವಿಜಯನಗರ ಜಿಲ್ಲೆಯ 133 ಪಂಚಾಯಿತಿಗಳು
- ಅಧಿಕಾರಾವಧಿ ಮುಕ್ತಾಯ ಸನ್ನಿಹಿತ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯದೆ ಐದು ವರ್ಷಗಳಾದವು. ಈಗ ಗ್ರಾಪಂಗಳ ಆಡಳಿತಾವಧಿ ಇನ್ನೊಂದು ತಿಂಗಳಲ್ಲಿ ಅಂತ್ಯವಾಗಲಿದ್ದು, ಆಡಳಿತಾಧಿಕಾರಿಗಳ ನೇಮಕಕ್ಕೆ ಸಿದ್ಧತೆ ನಡೆದಿದೆ. ಇದರಿಂದಾಗಿ ಗ್ರಾಪಂಗಳಿಗೆ ಯಾವಾಗ ಚುನಾವಣೆ ನಡೆಯಲಿದೆ ಎನ್ನುವ ಪ್ರಶ್ನೆ ಎದುರಾಗಿದೆ.
ಜಿಲ್ಲೆಯಲ್ಲಿ 2020ರಲ್ಲಿ ಗ್ರಾಪಂ ಚುನಾವಣೆ ನಡೆದಾಗ 137 ಗ್ರಾಪಂಗಳಿದ್ದವು. ಈ ಪೈಕಿ ಜ.31ರಿಂದ ಮಾರ್ಚ್ ಮೊದಲ ವಾರದ ವರೆಗೆ 133 ಗ್ರಾಪಂಗಳ ಆಡಳಿತಾವಧಿ ಮುಗಿಯಲಿದೆ. ಫೆಬ್ರವರಿ ಎರಡನೇ ವಾರಕ್ಕೆಲ್ಲ ಶೇ.90 ಗ್ರಾಪಂಗಳ ಅಧಿಕಾರ ಮುಗಿಯಲಿದೆ. ಈಗಾಗಲೇ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಲ್ಲಿ 2020ರ ಚುನಾವಣೆ ಸಮಯದಲ್ಲಿದ್ದ 137 ಗ್ರಾಪಂಗಳ ಪೈಕಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ತೂರು, ಕಿತ್ತನೂರು ಗ್ರಾಮ ಪಂಚಾಯಿತಿ ಆಡಳಿತ ಕೇಂದ್ರ ಸ್ಥಾನದ ಕಿತ್ತಾಟದಿಂದಾಗಿ ಚುನಾವಣೆ ನಡೆದಿಲ್ಲ. ಹಂಪಾಪಟ್ಟಣ ಗ್ರಾಪಂ ಆಡಳಿತಾವಧಿ 2027ಕ್ಕೆ ಮುಗಿಯಲಿದೆ. ಹರಪನಹಳ್ಳಿ ತಾಲೂಕಿನ ಹಾರಕನಾಳ ಗ್ರಾಪಂ ಆಡಳಿತಾವಧಿ ಇನ್ನೂ ಎರಡು ವರ್ಷ ಬಾಕಿ ಇದೆ. ಸೀತಾರಾಮ ತಾಂಡಾ ಗ್ರಾಮ ಪಂಚಾಯಿತಿ ಚುನಾವಣೆ ಇತ್ತೀಚೆಗೆ ನಡೆದಿದೆ.
ಜಿಪಂ-ತಾಪಂ ರೀತಿ ವಿಳಂಬ ಆಗುವ ಭೀತಿ
ರಾಜ್ಯ ಸರ್ಕಾರ ಜಿಪಂ, ತಾಪಂ ಹಾಗೂ ಗ್ರಾಪಂಗಳಿಗೆ ಒಂದೇ ಬಾರಿ ಚುನಾವಣೆ ನಡೆಸುವುದಾಗಿ ಹೇಳುತ್ತಿದೆ. ಆದರೆ, ಗ್ರಾಪಂಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯುವ ಬಗ್ಗೆ ಆಕಾಂಕ್ಷಿಗಳಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಜಿಪಂ, ತಾಪಂಗಳಲ್ಲಿ ಜನಪ್ರತಿನಿಧಿಗಳು ಇಲ್ಲದೆ ಆಡಳಿತ ಯಂತ್ರ ನೀರಸವಾಗಿದೆ. ಇನ್ನು ಗ್ರಾಪಂಗಳಲ್ಲೂ ಜನಪ್ರತಿನಿಧಿಗಳು ಇಲ್ಲದೆ ಹೋದರೆ ಏನಾಗಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ. ಕಳೆದ ಐದು ವರ್ಷಗಳಿಂದ ಜಿಪಂ ಮತ್ತು ತಾಪಂಗಳಲ್ಲಿ ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ರಾಜ್ಯ ಸರ್ಕಾರ ಇಂದು, ನಾಳೆ ಎಂದು ಹೇಳುತ್ತಾ ಐದು ವರ್ಷ ಪೂರೈಸಿದೆ. ಈಗ ಗ್ರಾಪಂಗಳ ಅಧಿಕಾರಾವಧಿ ಮುಗಿಯುತ್ತಿದ್ದು, ಜಿಪಂ ಮತ್ತು ತಾಪಂ ರೀತಿಯಲ್ಲೇ ಗ್ರಾಪಂ ಚುನಾವಣೆ ಮುಂದೂಡಿದರೆ ಮುಂದೇನು ಎಂಬುದು ಪ್ರಶ್ನೆಯಾಗಿದೆ.
ಜಿಲ್ಲೆಯ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕಕ್ಕೆ ತಯಾರಿ ಮಾಡಿಕೊಂಡಿದ್ದು, ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ತಾಲೂಕು ಮಟ್ಟದ ಎ ಮತ್ತು ಬಿ ಶ್ರೇಣಿಯ ಅಧಿಕಾರಿಗಳನ್ನು ಆಡಳಿತಾಧಿಕಾರಿಗನ್ನಾಗಿ ನೇಮಕ ಮಾಡಲಾಗುವುದು.