ಕೂಡ್ಲಿಗಿಯಲ್ಲಿ ರಾಯರ ಮಠ ನಿರ್ಮಾಣದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ ಮಠದ ಮೇಲ್ವಿಚಾರಕ ಜೋಯೀಸ್ ಹುಲಿರಾಜ ಆಚಾರ್ ಮಾತನಾಡಿದರು. ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸ ಶೆಟ್ಟಿ, ಬಿ. ಮಣಿಕಂಠ ಶೆಟ್ಟಿ, ಬಿ.ಎಸ್.ಆನಂದ ಬಾಬು, ಎಸ್.ವಿರೂಪಾಕ್ಷ ಮೂರ್ತಿ, ಜೋಯಿಸ್ ಹಯವದನಚಾರ್ ಇದ್ದರು.
ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳು ಬ್ರಾಹ್ಮಣರ ಸೊತ್ತಲ್ಲ. ಎಲ್ಲ ಜಾತಿಯ ಭಕ್ತರ ಆಸ್ತಿ ಎಂದು ಹುಬ್ಬಳ್ಳಿ ಗುರು ರಾಘವೇಂದ್ರ ಮಠದ ಮೇಲ್ವಿಚಾರಕ ಜೋಯೀಸ್ ಹುಲಿರಾಜ ಆಚಾರ್ ಹೇಳಿದರು.
ವಾಸವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಕೂಡ್ಲಿಗಿಯ ರಾಘವೇಂದ್ರ ಮಠ ನಿರ್ಮಾಣ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಹುದಿನಗಳ ಭಕ್ತರ ಆಶಯದಂತೆ ರಾಯರ ಮಠ ನಿರ್ಮಾಣಕ್ಕೆ ನಿವೇಶನ ನಿಗದಿ ಮಾಡಿದ್ದು, ಬಿ.ಆರ್.ಶ್ರೀನಿವಾಸ ಶೆಟ್ಟಿ ಸಹೋದರರು ಎಂಟು ಸಾವಿರ ಚದರಡಿ ಜಾಗ ದಾನವಾಗಿ ನೀಡಿದ್ದಾರೆ. ಜಾಗವನ್ನು ಶ್ರಾವಣ ಮಾಸದ ಒಳ್ಳೆಯ ದಿನಾಂಕ ನಿಗದಿ ಮಾಡಿ ಶೀಘ್ರವಾಗಿ ನೋಂದಣಿ ಮಾಡಿಸಿ, ನಂತರ ಮಂತ್ರಾಲಯ ಸ್ವಾಮಿ ಸುಬುಧೇಂದ್ರ ತೀರ್ಥರ ಜತೆ ಮಾತನಾಡಿ, ಭೂಮಿ ಪೂಜೆಗೆ ಬರಲು ಆಹ್ವಾನ ನೀಡಲಾಗುತ್ತದೆ ಎಂದರು.
ಈಗ ರಾಯರ ಆರಾಧನೆ ಆರಂಭವಾಗುವ ಕಾರಣ ಅವರು ಬರುವುದು ಅನುಮಾನ, ಸದ್ಯಕ್ಕೆ ಭೂಮಿ ಪೂಜೆ ಸಿದ್ಧತೆ ಕೈಗೊಳ್ಳಿ, ಅದಕ್ಕೆ ಬೇಕಾದ ಅಂದಾಜು ವೆಚ್ಚ, ರೂಪುರೇಷೆಗಳು, ಮಠ ಯಾವ ರೀತಿ ನಿರ್ಮಾಣವಾಗಬೇಕು ಎಂದು ತೀರ್ಮಾನಿಸಿ. ಮಠ ನಿರ್ಮಾಣಕ್ಕೆ ಅನುಭವಿ ಇಂಜಿನಿಯರ್ ಅವಶ್ಯಕತೆ ಇದ್ದು, ಅದರ ಜವಾಬ್ದಾರಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಂತ್ರಾಲಯ ಸ್ವಾಮಿಗಳ ಜತೆ ಚರ್ಚಿಸಿ, ನಿರ್ಧಾರ ಮಾಡಲಾಗುವುದು. ಉಳಿದಂತೆ ಹೊಸದುರ್ಗ ರಾಯರ ಮಠ ಅಥವಾ ಗದುಗಿನ ಬಳಿ ಅತ್ಯಂತ ಚೆನ್ನಾಗಿ ರಾಯರ ಮಠ ನಿರ್ಮಾಣವಾಗಿದ್ದು, ಅದೇ ರೀತಿಯಲ್ಲಿ ಮಠ ನಿರ್ಮಿಸಲು ಒಂದು ಬಾರಿ ಅಲ್ಲಿಗೆ ಹೋಗಿ ನೋಡಿ ತೀರ್ಮಾನಕ್ಕೆ ಬದ್ಧರಾಗಿ ಎಂದು ತಿಳಿಸಿದರು.
ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸ ಶೆಟ್ಟಿ, ಮಣಿಕಂಠ, ಬಿ.ಎಸ್.ಆನಂದ ಬಾಬು, ಎಸ್.ವಿರೂಪಾಕ್ಷ ಮೂರ್ತಿ, ಜೋಯಿಸ್ ಹಯವದನಚಾರ್, ಜೆ.ಎಸ್.ಪರಿಮಳ, ಬ್ಯಾಳಿ ಗೌರಮ್ಮ, ನಾಗಮಣಿ ಜಿಂಕಾಲ್, ಜಿ.ಕೆ.ಮುರುಳೀಧರ, ಮಾರುತಿ ರಾಯ್ಕರ್, ಗಂಟಿ ಗುರುರಾಜ ಶೆಟ್ಟಿ, ಜಿ.ಪಿ.ರಂಗನಾಥ, ವಿನೋದ ಕಲಾಲ್, ವಿನಾಯಕ ಶೆಟ್ಟಿ, ನವೀನ್, ಗುರುರಾಜ, ಅಶೋಕ್, ಸಪ್ತಗಿರಿ, ಶ್ರೀನಿವಾಸ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.