ನಾಗಚೌತಿ ಅಂಗವಾಗಿ ಭಾನುವಾರ ಪಟ್ಟಣದ ಬಸವಲಿಂಗೇಶ್ವರ ದೇವಸ್ಥಾನದ ಬಳಿಯ ನಾಗರಕಲ್ಲಿಗೆ ಭಕ್ತರು ಪೂಜೆ ಸಲ್ಲಿಸಿ ಹಾಲು ಎರೆದರು.
ಕೂಡ್ಲಿಗಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಮುನ್ನ ದಿನದ ನಾಗ ಚೌತಿಯನ್ನು ಭಾನುವಾರ ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಚೌತಿಗೆ ಹಾಲೆರೆಯುವವರು ಶನಿವಾರ ರೊಟ್ಟಿ ಹಬ್ಬ ಆಚರಿಸಿದರೆ, ಪಂಚಮಿಗೆ ಹಾಲು ಹಾಕುವವರು ಭಾನುವಾರ ರೊಟ್ಟಿ ಹಬ್ಬ ಆಚರಿಸಿ ಭಕ್ತಿ ಮೆರೆದರು. ಚೌತಿ ದಿನದಂದು ಭಕ್ತರು ಕುಟುಂಬದೊಂದಿಗೆ ಹೊಸ ಬಟ್ಟೆಗಳನ್ನು ತೊಟ್ಟು ದೇವಸ್ಥಾನದ ಬಳಿಯ ನಾಗಬನಕ್ಕೆ ಹಾಲು ಹಾಕಿದರೆ, ಕೆಲವರು ಮನೆಯಲ್ಲಿನ ಬೆಳ್ಳಿ ನಾಗರಕ್ಕೆ ಹಾಲೆರೆದರು.
ಪೂಜೆಗಾಗಿ ವೀಳ್ಯದೆಲೆಯ ಮೇಲೆ ಹಸಿ ತಂಬಿಟ್ಟು, ಎಳ್ಳಿನ ಚಿಗಳಿ, ಕಡಲೆ, ಹುಣಸೆ ಕಾಯಿ, ಅಡಿಕೆ, ದಕ್ಷಿಣೆ ಇಟ್ಟು ನಾಗರ ಕಲ್ಲಿಗೆ ಹತ್ತಿಯಿಂದ ಮಾಡಿದ ಹೆಜ್ಜೆ ವಸ್ತ್ರ ಹಾಕಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮನೆ ಮಂದಿಯಲ್ಲ ಸೇರಿ ಹಾಲೆರೆದರು. ನಂತರ ಸಹೋದರರಿಗೆ ಅವರ ಅಕ್ಕ, ತಂಗಿಯರು ದಾರದೆಳೆಗಳ ನೂಲು ಕಟ್ಟಿ ಸಹೋದರ ಬಾಂಧವ್ಯ ವೃದ್ಧಿಯಾಗಲೆಂದು ಹಾರೈಸಿದರು. ಪೂಜೆ ಬಳಿಕ ಸಾಮೂಹಿಕವಾಗಿ ನಾನಾ ಖಾದ್ಯ ಸವಿದರು.