ಕಲ್ಲಿನರಥಕ್ಕೆ ಪಿಂಕ್ ಬಣ್ಣದ ದೀಪಾಲಂಕಾರ
ಹೊಸಪೇಟೆ: ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ಹಂಪಿಯ ವಿಜಯ ವಿಠಲ ದೇಗುಲದ ಸಂಕೀರ್ಣದಲ್ಲಿರುವ ಸುಪ್ರಸಿದ್ಧ ಕಲ್ಲಿನ ರಥ ಭಾನುವಾರ ರಾತ್ರಿ ಗುಲಾಬಿ (ಪಿಂಕ್) ಬಣ್ಣದ ಬೆಳಕಿನಿಂದ ಕಂಗೊಳಿಸಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಂಪಿ ವೃತ್ತವು ಸ್ಮಾರಕಕ್ಕೆ ಧಕ್ಕೆಯಾಗದಂತೆ ಸೂಕ್ತ ಷರತ್ತುಗಳೊಂದಿಗೆ ದೀಪಾಲಂಕಾರಕ್ಕೆ ಅನುಮತಿ ನೀಡಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ತೀವ್ರ ಕುತೂಹಲ ಮೂಡಿಸಿತು.
ಸಂಜೆ 6 ರಿಂದ ರಾತ್ರಿ 10 ರವರೆಗೆ ಕಣ್ಮನ ಸೆಳೆಯುವ ಪ್ರದರ್ಶನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಈ ವಿಶಿಷ್ಟ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಲ್ಲಿನ ರಥದ ಮೇಲೆ ಆಕರ್ಷಕ ಗುಲಾಬಿ ಬೆಳಕಿನ ಸಂಯೋಜನೆ ಪ್ರದರ್ಶನಗೊಂಡಿತು.
ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಅದ್ಭುತ ಕಲಾಕೃತಿಯಾಗಿರುವ ಕಲ್ಲಿನ ರಥಕ್ಕೆ ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇಂತಹ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಮಹಿಳಾ ಸಬಲೀಕರಣದ ಸಂಕೇತವಾಗಿರುವ ಗೃಹಲಕ್ಷ್ಮಿ ಯೋಜನೆಯ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಲು ಈ ಗುಲಾಬಿ ಬೆಳಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಲ್ಲಿನ ಕೆತ್ತನೆಗಳ ಮೇಲೆ ಬೀಳುವ ಈ ಬಣ್ಣದ ಬೆಳಕು ಇತಿಹಾಸ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಅಪರೂಪದ ದೃಶ್ಯ ವೈಭವವನ್ನು ಒದಗಿಸಿತು.
ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳಾದ ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಉಡುಪಿಯ ಕಾಪು ಲೈಟ್ ಹೌಸ್ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಗಳಲ್ಲೂ ಇದೇ ಮಾದರಿಯ ಗುಲಾಬಿ ಬೆಳಕಿನ ವ್ಯವಸ್ಥೆ ಮಾಡಲಾಗಿದಡ. ಹಂಪಿಯ ಕಲ್ಲಿನ ರಥದ ದೃಶ್ಯ ಮಾತ್ರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ಹಾಗೂ ಎಎಸ್‌ಐ ಅಧಿಕಾರಿಗಳು ಸ್ಮಾರಕ ಸಂರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.