ಕೊಟ್ಟೂರಿನಲ್ಲಿ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಪ್ರತಿಷ್ಠಾಪನೆ ಶತಮಾನೋತ್ಸವ ಸಮಾರಂಭದ ಧರ್ಮಸಭೆಯನ್ನು ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.  
ವಿಜಯನಗರ

ಪದ್ಮಶಾಲಿ ಸಮುದಾಯದ ಒಗ್ಗಟ್ಟು ಪ್ರದರ್ಶನ

ಕೊಟ್ಟೂರು: ಶ್ರೀ ಮಾರ್ಕಂಡೇಶ್ವ ಸ್ವಾಮಿ ಪ್ರಾತಿಷ್ಠಾಪನೆ ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿರುವುದು ಪದ್ಮಶಾಲಿ ಬಹೂತ್ತಮ ಸಮಾಜದ ಜನರ ಸಹಕಾರ, ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸ್ವಾಮಿ ಪ್ರತಿಷ್ಠಾಪನೆ ಶತಮಾನೋತ್ಸವ ಸಮಾರಂಭದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಬುಧವಾರ ಅಶೀರ್ವಚನ ನೀಡಿದರು. ಮೂರು ದಿನಗಳ ಶತಮಾನೋತ್ಸವ ಸಮಾರಂಭ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದಾಗಿದೆ. ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಮೂಲ ಸ್ಥಳ ರಾಣೆಬೆನ್ನೂರಿನ ಮುದೇನೂರು ಗ್ರಾಮವಾಗಿದ್ದು, ಈ ಕುರಿತು ಹಲವು ಕುರುವುಗಳು ಅಲ್ಲಿವೆ ಎಂದು ತಿಳಿಸಿದರು.
ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಪದ್ಮಶಾಲಿ ಬಹೂತ್ತಮ ಸಮುದಾಯ ಶ್ರಮಿಕ ಸಮಾಜವಾಗಿದ್ದು, ನಾಡಿಗೆ ಬಟ್ಟೆಯನ್ನು ಪರಿಚಯಿಸಿದೆ. ಇಂತಹ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ. ಸಮುದಾಯದ ಜನರ ಒಗ್ಗಟ್ಟು ಮುಂದೊಂದು ದಿನ ನೆರವಾಗಲಿದೆ. ಮಠ-ಮಾನ್ಯಗಳ ಮೊರೆ ಹೋಗುತ್ತಿರುವ ಹಳ್ಳಿಗಳ ಜನರಿಂದಾಗಿ ಭಾರತೀಯ ಸಂಸ್ಕೃತಿ ಉಳಿದಿದೆ. ನಗರದ ಜನರಲ್ಲಿ ಸಂಸ್ಕೃತಿ-ಸಂಸ್ಕಾರ ಕಾಣುತ್ತಿಲ್ಲ. ಮಕ್ಕಳನ್ನು ಶಿಕ್ಷಣ, ಶಿವಭಕ್ತರು, ಸುಸಂಸ್ಕೃತರನ್ನಾಗಿ ಮಾಡಬೇಕು. ಆಗ ನಿಮ್ಮ ಕುಟುಂಬದೊಂದಿಗೆ ಸಮುದಾಯವೂ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಸಮಾಜ ಸೇವಕಿ ರೂಪಾ ಉದಯಸಿಂಗ್ ಲಾಡ್, ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್, ಶ್ರೀ ಶಿವಭಕ್ತ ಮಾರ್ಕಂಡೇಶ್ವ ಸಮಾಜ ಸಮಿತಿ ಕಾರ್ಯದರ್ಶಿ ದೇವರೆಡ್ಡಿ ಪರಮೇಶ್ವರಪ್ಪ, ತುಮ್ಮಿನಕಟ್ಟೆ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ, ಅಖಿಲ ಭಾರತ ಪದ್ಮಶಾಲಿ ಮಹಿಳಾ ಸಂಘದ ಉಪಾಧ್ಯಕ್ಷೆ ರುಕ್ಮಿಣಿ ಗಣೇಶ್ ಸಾಂಗ, ಉಪಾಧ್ಯಕ್ಷ ಕೊಂಕತಿ ಕಾಳಪ್ಪ, ಕಿತ್ತಾಳೆಮಠ ಮಂಜುನಾಥ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಪಪಂ ಸದಸ್ಯ, ವಕೀಲ ಬಾವಿಕಟ್ಟಿ ಶಿವಾನಂದ, ದೇವಸ್ಥಾನ ಸಮಿತಿಯ ಕೊರಂಟ್ಲಿ ಕೊಟ್ರೇಶ್, ದೇವರೆಡ್ಡಿ ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಮೃತ್ಯುಂಜಯ ಬದಾಮಿ ಇತರರಿದ್ದರು.