- ಸಚಿವ ಬಿ.ನಾಗೇಂದ್ರ ಹೇಳಿಕೆಗೆ ಶಾಸಕ ಕೃಷ್ಣನಾಯ್ಕ ಟಾಂಗ್
ಹೊಸಪೇಟೆ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಹಂತದಲ್ಲಿದ್ದರೂ, ಪ್ರಮುಖ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಬಿಜೆಪಿ ಉಗ್ರ ಹೋರಾಟ ರೂಪಿಸಲಿದೆ ಎಂದು ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮಕ್ಕೆ ಸೇರಿದ 187 ಕೋಟಿ ರೂಪಾಯಿ ಹಣವನ್ನು ನೆರೆರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಚುನಾವಣೆಗಾಗಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಸರ್ಕಾರಕ್ಕೆ ವಾಪಸ್ ಬಂದ ಹಣ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶೋಷಿತ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ, ಪ್ರಕರಣದಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ತನಿಖೆ ನಡೆಯುತ್ತಿರುವ ಹಂತದಲ್ಲೇ, ರಾಜೀನಾಮೆ ನೀಡಿದ್ದ ಸಚಿವರಿಗೆ ಮತ್ತೆ ಸಂಪುಟದಲ್ಲಿ ಸ್ಥಾನ ನೀಡಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ ಎಂದು ಆಗ್ರಹಿಸಿದರು.
ಸ್ವತಃ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ 80 ಕೋಟಿ ರೂಪಾಯಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ತನಿಖೆ ಪೂರ್ಣಗೊಳ್ಳುವ ಮುನ್ನವೇ ನಾಗೇಂದ್ರ ಅವರಿಗೆ ಮತ್ತೆ ಸಂಪುಟದಲ್ಲಿ ಸ್ಥಾನ ನೀಡಿರುವುದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ. ಸರ್ಕಾರಕ್ಕೆ ವಾಲ್ಮೀಕಿ ಸಮುದಾಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಕ್ಷಣವೇ ಅವರಿಂದ ರಾಜೀನಾಮೆ ಪಡೆದು ನ್ಯಾಯ ಒದಗಿಸಬೇಕು. ಈ ವಿಷಯದಲ್ಲಿ ಜೆಡಿಎಸ್ ಬೆಂಬಲದೊAದಿಗೆ ಸದನದ ಒಳಗೂ, ಹೊರಗೂ ಹಾಗೂ ಜಿಲ್ಲಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.
ದಲಿತರ ಏಳಿಗೆ ಬಿಜೆಪಿನವರು ಸಹಿಸಲ್ಲ ಎಂದು ಸಚಿವ ನಾಗೇಂದ್ರ ಅವರ ಹೇಳಿಕೆಗೆ, ನಾವು 187 ಕೋಟಿ ರೂ. ದಲಿತರ ಹಣ ಕೇಳುತ್ತಿರುವುದು ದಲಿತರ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿದೆ. ಬಿಜೆಪಿ ನಡೆಸುತ್ತಿರುವ ಹೋರಾಟ ದಲಿತರಿಗಾಗಿ, ಇದರಲ್ಲಿ ಜಾತಿ ಎಲ್ಲಿಂದ ಬಂತು? ಹೇಗೆಂದರೆ ವಾಲ್ಮೀಕಿ ಹಗರಣ ಕೇಳುವುದು ತಪ್ಪ? ಇಲ್ಲವೇ ಅವರು ಹಗರಣ ಮಾಡಿದ್ದು ಸರಿನ ಎಂದು ಟಾಂಗ್ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಕೇಂದ್ರ ಸರ್ಕಾರಕ್ಕೆ ಸರಿಯಾದ ವರದಿ ನೀಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಕ್ಷಣವೇ ಬರಗಾಲ ಘೋಷಿಸಿ ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಸದನ ನಡೆಯಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಜಾರ್ಖಂಡ್‌ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಮೇಲಿನ ದಾಳಿ ಹಾಗೂ ಮಾನವ ಹಕ್ಕುಗಳ ಹತ್ತಿಕ್ಕುವ ಯತ್ನವನ್ನು ಖಂಡಿಸಿದ ಅವರು, ರಾಜ್ಯದಲ್ಲಿ ತಕ್ಷಣ ಬರಗಾಲ ಘೋಷಿಸಿ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಬೇಕು. ಅಲ್ಲಿಯವರೆಗೆ ಸದನ ಮಾಡಲು ಬಿಡುವುದಿಲ್ಲ ಎಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರಮುಖರಾದ ಚನ್ನಬಸವನಗೌಡ ಪಾಟೀಲ್, ಸಂದೀಪ್ ಸಿಂಗ್, ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಬಲ್ಲಾಹುಣಸಿ ರಾಮಣ್ಣ, ಜಗದೀಶ್ ಕಮಟಗಿ, ಮಧುಸೂದನ್ ಇತರರಿದ್ದರು.