ಕನ್ನಡ ವಿವಿಯಲ್ಲಿ ಮಂಗಳವಾರ ಹೊರಗುತ್ತಿಗೆ ನೌಕರರು ಬಾಕಿ ವೇತನ ಪಾವತಿಗೆ ಆಗ್ರಹಿಸಿ ಕುಲಪತಿ ಡಾ.ಪರಮಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಗದಿಗಯ್ಯ, ಪ್ರಧಾನ ಕಾರ್ಯದರ್ಶಿ ನಾಗೂನಾಯ್ಕ, ಪ್ರಮುಖರಾದ ನಿಂಗಪ್ಪ, ಚಿದಾನಂದ ಇತರರಿದ್ದರು. 
ವಿಜಯನಗರ

ಕನ್ನಡ ವಿವಿ ಹೊರಗುತ್ತಿಗೆ ನೌಕರರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • 11 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಮನವಿ ಸಲ್ಲಿಕೆ
ಹೊಸಪೇಟೆ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಕನ್ನಡ ವಿವಿ ಹೊರಗುತ್ತಿಗೆ ನೌಕರರ ಸಂಘದಿAದ ಕುಲಪತಿ ಡಾ.ಪರಮಶಿವಮೂರ್ತಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.
ಕನ್ನಡ ವಿವಿಯಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳುಗಳಿAದ ವೇತನ ಪಾವತಿಯಾಗದೆ ತೀವ್ರ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರದ ಕನಿಷ್ಠ ವೇತನ ನಿಯಮಗಳನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ಬಾಕಿ ಇರುವ 11 ತಿಂಗಳ ಸಂಬಳವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷರಾದ ಮರಡಿ ಜಂಬಯ್ಯನಾಯಕ ಮಾತನಾಡಿ, ಸರ್ಕಾರದ ಅಂತಿಮ ಅಧಿಸೂಚನೆ ಬಂದಿದ್ದರೂ ಸಹ ಕನಿಷ್ಠ ವೇತನ ಜಾರಿಗೊಳಿಸದೆ ವಿಶ್ವವಿದ್ಯಾಲಯವು ನೌಕರರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೀಡಾಗಿ 2024ರ ಏಪ್ರಿಲ್‌ನಲ್ಲಿ ನೌಕರ ನಾಯಕರ ನಂದೆಪ್ಪ ದುರಂತ ಸಾವಿಗೀಡಾಗಿದ್ದರು ಎಂದ ಅವರು, ಹೊರಗುತ್ತಿಗೆ ಸಂಪನ್ಮೂಲ ಏಜೆನ್ಸಿಗಳು ನೌಕರರ ಕೈಗೆ ಸಿಗದೆ ಜಾರಿಕೊಳ್ಳುತ್ತಿವೆ ಎಂದರು.
ಸರ್ಕಾರದ ಆದೇಶದಂತೆ ಮೇ 22, 2026 ರಿಂದ ಅನ್ವಯವಾಗುವಂತೆ ತಕ್ಷಣ ಕನಿಷ್ಠ ವೇತನ ಜಾರಿಗೊಳಿಸಬೇಕು. ಬಾಕಿ ಇರುವ 11 ತಿಂಗಳ ಸಂಬಳವನ್ನು ತಕ್ಷಣವೇ ಪಾವತಿಸಬೇಕು. ನೇಮಕಾತಿ ಆದೇಶ, ಇಎಸ್ಐ, ಪಿಎಫ್ ವಿವರ, ಪ್ರತಿ ತಿಂಗಳ ಸಂಬಳದ ಚೀಟಿ ಹಾಗೂ ಸರ್ವಿಸ್ ಸರ್ಟಿಫಿಕೇಟ್ ಒದಗಿಸಬೇಕು. ಕಳದ 24 ವರ್ಷಗಳಿಂದ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಅಥವಾ ವಯೋನಿವೃತ್ತಿಯವರೆಗೆ ಕೆಲಸದ ಭದ್ರತೆ ನೀಡಬೇಕು. ಮೃತ ನಾಯಕರ ನಂದೆಪ್ಪ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಗದಿಗಯ್ಯ, ಪ್ರಧಾನ ಕಾರ್ಯದರ್ಶಿ ನಾಗೂನಾಯ್ಕ, ಪ್ರಮುಖರಾದ ನಿಂಗಪ್ಪ, ಚಿದಾನಂದ, ಪಿ.ಪದ್ಮಾವತಿ, ಗಾಯತ್ರಿ, ಶೃತಿ, ಬಿ.ಯಶೋಧ, ಎ.ರಾಮಾಂಜಿನಿ, ಬಸವರಾಜ, ರಾಜು, ಎಚ್.ಶ್ವೇತಾ, ನೇತ್ರಾವತಿ, ಹೊನ್ನವ್ವ, ಕೃಷ್ಣವೇಣಿ, ನಾಗರತ್ನಮ್ಮ, ಅಂಬಮ್ಮ, ಮಂಗಳಮ್ಮ, ಬಿ. ಪಂಪಾಪತಿ, ಸುಂಕಮ್ಮ ಇತರರಿದ್ದರು.