ಶಿವರಾತ್ರಿ ಅಂಗವಾಗಿ ಪಟ್ಟಣದ ಗುಡೇಕೋಟೆ ರಸ್ತೆಯ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.  
ವಿಜಯನಗರ

ಬೇಲದ ಹಣ್ಣಿನ ನೈವೇದ್ಯ ಸಮರ್ಪಣೆ

ಅಶೋಕ್ ಕುಮಾರ್ ಎನ್
ಕೂಡ್ಲಿಗಿ: ಶಿವರಾತ್ರಿ ಅಂಗವಾಗಿ ತಾಲೂಕಿನ ಎಲ್ಲ ಶಿವ ದೇವಾಲಯಗಳು ಭಾನುವಾರ ಸುಣ್ಣ, ಬಣ್ಣಗಳಿಂದ ಕಂಗೊಳಿಸಿದವು. ಶನಿವಾರ ರಾತ್ರಿಯಿಂದಲೇ ದೇವಸ್ಥಾನಗಳನ್ನು ಅಲಂಕರಿಸುವ ಕಾರ್ಯ ನಡೆಯಿತು.
ಭಾನುವಾರ ಬೆಳಿಗ್ಗೆಯಿಂದ ಭಕ್ತರು ಮಡಿಯಿಂದ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯ ಕೈಗೊಂಡರು. ಬಿಲ್ವಪತ್ರೆ, ಕಣಗಲ ಹೂ ಅರ್ಪಿಸಿದರು. ನೈವೇದ್ಯಕ್ಕೆ ಬೇಲ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಅರ್ಪಣೆ ಮಾಡಿದರು. ಪಟ್ಟಣದ ರಾಮಲಿಂಗೇಶ್ವರ, ಚಿದಂಬರ, ನರಸಿಂಹ ಹಾಗೂ ಸಿದ್ದಯ್ಯನ ಗುಡ್ಡದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿದರು.
ಗುಡೇಕೋಟೆ ಗ್ರಾಮದ ಐತಿಹಾಸಿಕ ಹಿನ್ನೆಲೆಯ ಶಿವ ದೇವಸ್ಥಾನದಲ್ಲಿ ಶಿವ, ಪಾರ್ವತಿಗೆ ರುದ್ರಾಭಿಷೇಕ ಮಾಡಲಾಯಿತು. ಉಪವಾಸವಿದ್ದ ಭಕ್ತರು ದೇವರ ದರ್ಶನ ಪಡೆದು ಹಣ್ಣುಗಳ ಪ್ರಸಾದ ಸೇವನೆ ಮಾಡಿದರು. ಸಂಜೆ ಮನೆಗಳಲ್ಲಿ ಮಂಡಕ್ಕಿ ವಗ್ಗರಣೆ, ಮಿರ್ಚಿ, ಗಾರಿಗೆ, ಪಾನಕ ಹಾಗೂ ಬೇಲದ ಹಣ್ಣಿನ ಖಾದ್ಯ ಸೇವಿಸಿದರು. ತಾಲೂಕಿನ ಎಲ್ಲ ಶಿವಾಲಯಗಳಲ್ಲಿ ಅಹೋರಾತ್ರಿ ಭಜನೆ ನಡೆದವು. ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಶಿವರಾತ್ರಿ ಅಂಗವಾಗಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು, ಸಾರ್ವಜನಿಕರು ಕಿರಾಣಿ ಅಂಗಡಿಗಳಲ್ಲಿ ಮಂಡಕ್ಕಿ, ಕಡಲೆಬೇಳೆ ಹಿಟ್ಟು ಹಾಗೂ ಅಡುಗೆ ಎಣ್ಣೆ ಖರೀದಿಸಿದರು. ಹಣ್ಣಿನ ಅಂಗಡಿಗಳ ಮುಂದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.