ಜಲಾಶಯದಲ್ಲಿ ಕ್ರಸ್ಟ್‌ಗೇಟ್ ಅಳವಡಿಸುತ್ತಿರುವ ಕಾರ್ಮಿಕರು. 
ವಿಜಯನಗರ

ತುಂಗಭದ್ರಾ ಜಲಾಶಯದ 21 ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಹೊಸ ನೀರು ಬರುವ ಮುನ್ನವೇ ಕಾಮಗಾರಿ ಮುಕ್ತಾಯ ಸಾಧ್ಯತೆ
  • ಯುದ್ಧೋಪಾದಿಯಲ್ಲಿ ಸಾಗಿದೆ ಕಾರ್ಯಾಚರಣೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯ ಭರದಿಂದ ಸಾಗಿದೆ. ಈವರೆಗೆ ಒಟ್ಟು 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ಎಪ್ರಿಲ್ ತಿಂಗಳೊಳಗೆ ಕಾಮಗಾರಿ ಸಂಪೂರ್ಣಗೊಳ್ಳುವ ಸಾಧ್ಯತೆಯಿದೆ.
2024ರ ಅ.10ರಂದು ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಸಂಭವಿಸಿದ ದುರಂತದ ಒಂದು ವರ್ಷದ ನಂತರ (2025ರ ಡಿಸೆಂಬರ್‌ನಲ್ಲಿ) ಗೇಟ್‌ಗಳ ಬದಲಾವಣೆಗೆ ಚಾಲನೆ ನೀಡಲಾಗಿತ್ತು. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ ಈವರೆಗೆ 21 ಗೇಟ್‌ ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್‌ ಗಳ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ಮುಂದಿನ ತಿಂಗಳ ಕೊನೆಯ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಗೇಟ್‌ಗಳಿಗೆ ಪೇಂಟಿಂಗ್ ನಡೆಯಲಿದ್ದು, ಟೆಂಡರ್ ಷರತ್ತಿನಂತೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಜಲಾಶಯಕ್ಕೆ ಹೊಸ ನೀರು ಬರುವ ಮುನ್ನವೇ ಕಾರ್ಯ ಮುಗಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ತಂಡಗಳಿಂದ ಬಿರುಸಿನ ಕೆಲಸ

ಜಲಾಶಯದ ಗೇಟ್‌ಗಳ ಬದಲಾವಣೆ ಕಾರ್ಯದಲ್ಲಿ 60 ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಪ್ರತಿ ತಂಡದಲ್ಲಿ ಐದರಿಂದ ಆರು ಜನರಂತೆ ಒಟ್ಟು ಎಂಟತ್ತು ತಂಡಗಳು ಅಳವಡಿಕೆ ಕಾರ್ಯದಲ್ಲಿ ಈ ವರೆಗೆ 1 01, 02, 03, 04, 05, 06, 11, 17, 18, 19, 20, 24, 25, 26, 27, 28, 29, 30, 31, 32 ಮತ್ತು 33ನೇ ಸಂಖ್ಯೆಯ ಕ್ರಸ್ಟ್ ಗೇಟ್ ಗಳ ಅಳವಡಿಕೆ ಪೂರ್ಣಗೊಂಡಿದೆ. ಇವುಗಳಲ್ಲಿ 04, 11, 17, 18, 19, 20, 24 ಹಾಗೂ 31 ಸಂಖ್ಯೆಯ ಗೇಟ್‌ಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಪ್ರಸ್ತುತ 06, 07, 08, 09, 12, 21 ಮತ್ತು 22ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

ಪರೀಕ್ಷಾರ್ಥ ಕಾರ್ಯ ಮಾತ್ರ ಬಾಕಿ

ಈಗಾಗಲೇ 30 ಹೊಸ ಗೇಟ್‌ಗಳ ತಯಾರಿಕೆ ಪೂರ್ಣಗೊಂಡಿದೆ. ಉಳಿದ ಮೂರು ಗೇಟ್‌ಗಳ ತಯಾರಿಕೆಯೂ ಬಹುತೇಕ ಮುಗಿದಿದ್ದು, ಇವುಗಳ ಪರೀಕ್ಷಾರ್ಥ ಕಾರ್ಯ ಮಾತ್ರ ಬಾಕಿ ಇದೆ. ಜಲಾಶಯದಲ್ಲಿದ್ದ 33 ಹಳೆಯ ಗೇಟ್‌ಗಳ ಪೈಕಿ 29 ಗೇಟ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇನ್ನುಳಿದ ಮೂರು ಹೊಸ ಗೇಟ್ ಗಳ ತಯಾರಿಕೆ ಹಾಗೂ ನಾಲ್ಕು ಹಳೆಯ ಗೇಟ್ ತೆರವು ಕಾರ್ಯ ಒಂದು ವಾರದೊಳಗೆ ಮುಕ್ತಾಯವಾಗಲಿದೆ.
"

ಗೇಟ್‌ಗಳ ತಯಾರಿಕೆ ಹಾಗೂ ಅಳವಡಿಕೆ ಕಾರ್ಯ ವೇಗವಾಗಿ ಸಾಗಿದೆ. ಈವರೆಗೆ 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.

"

ಜಲಾಶಯದ ದುರಂತದ ನಂತರ ಟಿಬಿಬಿ ಹಾಗೂ ಸರ್ಕಾರಗಳು ಕಾಲಹರಣ ಮಾಡಿದ್ದರಿಂದಲೇ ಈ ಬಾರಿ ಎರಡನೇ ಬೆಳೆಗೆ ನೀರು ಸಿಗಲಿಲ್ಲ. ಜಲಾಶಯಕ್ಕೆ ಒಳಹರಿವು ಆರಂಭವಾಗುವ ಮೊದಲೇ ಎಲ್ಲ ಗೇಟ್‌ಗಳನ್ನು ಅಳವಡಿಸಿ ಮಂಡಳಿ ತನ್ನ ಜವಾಬ್ದಾರಿ ಪೂರೈಸಲಿ.