ಹೊಸಪೇಟೆ ತಾಲೂಕಿನ ಗುಂಡಾ ಕಾಯಿ ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಆವರಿಸಿರುವುದು 
ವಿಜಯನಗರ

ಕಾಡಿಚ್ಚು ನಿಯಂತ್ರಣಕ್ಕಿಲ್ಲ ಕ್ರಮ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಮುನ್ನವೇ ಸಾವಿರಾರು ಹೆಕ್ಟೇರ್ ಅರಣ್ಯ ನಾಶ
  • ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ
  • ಪರಿಸರಪ್ರಿಯರ ಆಕ್ರೋಶ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಏಷ್ಯಾದ ಮೊದಲ ಕರಡಿ ಸಂರಕ್ಷಿತ ಧಾಮ ಸೇರಿದಂತೆ ವಿಜಯನಗರ ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳಿಂದ ಕಾಡಿಚ್ಚು ಅವರಿಸಿ, ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಭಸ್ಮವಾಗುತ್ತಿದೆ. ಕಾಡಿಚ್ಚು ಹರಡದಂತೆ ಕ್ರಮ ವಹಿಸಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು, ಕುರುಚಲು ಹಾಗೂ ಲಾಂಟನಾ ಗಿಡಗಳು, ಒಣಗಿದ ತರಗೆಲೆಗಳು ಉದುರಿ ಹೋಗಿವೆ. ಕಾಡಿಚ್ಚಿನಿಂದಾಗಿ ಅರಣ್ಯ ಪ್ರದೇಶದಲ್ಲಿರುವ ಗಿಡ-ಮರಗಳೊಂದಿಗೆ ಪ್ರಾಣಿ, ಪಕ್ಷಿಗಳೂ ನಾಶವಾಗುತ್ತಿವೆ. ಬೇಸಿಗೆ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಅಧಿಕಾರಿಗಳು ಸುಮ್ಮನಿದ್ದಾರೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.
ಕಾಡಂಚಿನಲ್ಲಿ ಫೈರ್‌ಲೈನ್ ಅಳವಡಿಸುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ. ಕಾಡಿನಲ್ಲಿ ಅಪರಿಚಿತರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದರೆ ಅಂಥವರನ್ನು ಹಿಂಬಾಲಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜತೆಗೆ ಕಾಡಿನಲ್ಲಿ ಗಸ್ತು ತಿರುಗುವ ತಂಡಗಳು ಕೂಡ ರಚನೆಯಾಗಿಲ್ಲ ಎಂದು ದೂರು ಕೇಳಿ ಬಂದಿದೆ.
ಜಿಲ್ಲೆಯಲ್ಲಿ 1,51,289.59 ಹೆಕ್ಟೇರ್ ಅರಣ್ಯ ಪ್ರದೇಶ ಇದ್ದು, ದರೋಜಿ ಹಾಗೂ ಗುಡೇಕೋಟೆಯಲ್ಲಿ ಕರಡಿಧಾಮ ಹಾಗೂ ಅಂಕಸಮುದ್ರದಲ್ಲಿ ಪಕ್ಷಿಧಾಮವಿದೆ. 2025-26ನೇ ಸಾಲಿನಲ್ಲಿ ಹೊಸಪೇಟೆ ತಾಲೂಕಿನಲ್ಲಿ 150 ಹೆಕ್ಟೇರ್‌ಗೂ ಅಧಿಕ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಪ್ರಾಣಿಗಳಿಗೆ ನಾನಾ ರೀತಿಯಲ್ಲಿ ತೊಂದರೆ
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಚಿರತೆ, ಕರಡಿ, ಕತ್ತೆ ಕಿರುಬ, ಕಾಡುಹಂದಿ, ಗುಳ್ಳೆ ನರಿ, ಮುಳ್ಳುಹಂದಿ, ನವಿಲುಗಳು, ಕೋತಿಗಳು, ಮೊಲ, 120 ಪ್ರಭೇದದ ಪಕ್ಷಿಗಳು ಕಂಡುಬಂದಿದ್ದು, ಈ ಪೈಕಿ 74 ಜಾತಿಯ ವಿದೇಶಿ ಪಕ್ಷಿಗಳು, ಸರಿಸೃಪಗಳು, ಇನ್ನಿತರ ಪ್ರಾಣಿಗಳು ಹೆಚ್ಚಾಗಿವೆ. ದರೋಜಿ, ಗುಡೇಕೋಟೆ ಕರಡಿಧಾಮ ಹೊರತುಪಡಿಸಿದರೆ ಇತರ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರಿನ ಸೌಕರ್ಯವಿಲ್ಲದ ಕಾರಣ ಆಗಾಗ ನಾಡಿನತ್ತ ಆಗಮಿಸುತ್ತಿರುತ್ತವೆ. ಈ ವೇಳೆ ರಸ್ತೆಯಲ್ಲಿ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಅಗತ್ಯ ನೀರಿನ ಸೌಲಭ್ಯ ಕಲ್ಪಿಸುವುದರೊಂದಿಗೆ ಕಾಡಿಚ್ಚು ಕುರಿತು ಜಾಗೃತಿ ವಹಿಸಿದರೆ ಪ್ರಾಣಿಗಳ ರಕ್ಷಣೆ ಮಾಡಬಹುದಾಗಿದೆ.
ಇಲಾಖೆ ಬಳಿಯಿಲ್ಲ ಮಾಹಿತಿ
ಅರಣ್ಯ ಇಲಾಖೆ ಬಳಿ ಕಳೆದ ಐದು ವರ್ಷದ ಕಾಡಿಚ್ಚು ಮಾಹಿತಿ ಲಭ್ಯವಿಲ್ಲ. ಈ ಕುರಿತು ವಿಜಯನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಅನುಪಮಾ ಅವರನ್ನು ಕೇಳಿದರೆ, ಮಾಹಿತಿ ನೀಡಲು ಕನಿಷ್ಠ ಒಂದು ವಾರ ಬೇಕಾಗುತ್ತದೆ. ಪ್ರತಿ ವರ್ಷದ ದಾಖಲೆಗಳು ನಮ್ಮಲ್ಲಿ ಸಿಗುವುದು ಕಷ್ಟ ಎಂದು ತಿಳಿಸಿದರು.
ಕಾಡ್ಡಿಚ್ಚು ಕುರಿತ ಮಾಹಿತಿ ಯನ್ನು ಅರಣ್ಯ ಅಧಿಕಾರಿ ಗಳಿಗೆ `ಕೇಳಲಾಗಿದೆ. ಈ ಕುರಿತು ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಕಾಡಿಚ್ಚು ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ, ವಿಜಯನಗರ
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಡಿಚ್ಚು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗ್ನಿ ಅವಘಡ ನಿಯಂತ್ರಣಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಅವಘಡ ಸಂಭವಿಸಿದ ಮಾಹಿತಿ ಬಂದ ಕೂಡಲೆ ತಂಡ ಸಕ್ರಿಯವಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಲಿದೆ.
ಅನುಪಮಾ ಅರಣ್ಯ ಉಪ ಸಂರಕ್ಷಣಾಧಿಕಾರಿ, ವಿಜಯನಗರ