ಹೂವಿನಹಡಗಲಿ ತಾಲೂಕಿನ ಅಂಗವಿಕಲರಿಗೆ ನೀಡಬೇಕಿದ್ದ ತ್ರಿಚಕ್ರ ವಾಹನಗಳು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಸಿಲಲ್ಲಿ ನಿಲ್ಲಿಸಿರುವುದು.
- ಯಂತ್ರಚಾಲಿತ ತ್ರಿಚಕ್ರ ವಾಹನಗಳು ತುಕ್ಕು
- ಹೂವಿನಹಡಗಲಿ ಅಂಗವಿಕಲ ಫಲಾನುಭವಿಗಳಿಗೆ ಕಾಯಬೇಕಾದ ಸ್ಥಿತಿ
ಹೂವಿನಹಡಗಲಿ: ತಾಲೂಕಿನ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಬೇಕಿದ್ದ 14 ಯಂತ್ರಚಾಲಿತ ತ್ರಿಚಕ್ರ ವಾಹನಗಳು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ತುಕ್ಕು ಹಿಡಿಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷೃಕ್ಕೆ ಕೈನ್ನಡಿಯಂತಿದೆ.
ಸಂಸದರ ನಿಧಿಯಿಂದ ಪ್ರತಿ ವಾಹನಕ್ಕೆ 1.30 ಲಕ್ಷ ರೂ.ನಂತೆ 14 ವಾಹನಗಳಿಗೆ 1.82 ಲಕ್ಷ ರೂ. ಅನುದಾನ ಒದಗಿಸಿ 2024 -25ನೇ ಸಾಲಿನ ಖರೀದಿಸಲಾಗಿದೆ. ಕಳೆದ 2025ರ ಡಿಸೆಂಬರ್‌ನಲ್ಲಿ ವಾಹನಗಳು ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಸೇರಿವೆ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಂಗವಿಕಲ ಫಲಾನುಭವಿಗಳಿಗೆ ಜನವರಿಯಿಂದ ಕ್ರಮೇಣ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ.
ಆದರೆ, ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ವಿತರಿಸದಿರುವುದು ವಿಪರ್ಯಾಸ. ಅಲ್ಲದೆ, ಹೂವಿನಹಡಗಲಿ ಶಾಸಕ ಬಿಜೆಪಿಯವರು ಎಂಬ ಕಾರಣಕ್ಕೆ ಇಲ್ಲಿ ವಿತರಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರಿಂದ ವಾಹನ ಪಡೆಯಬೇಕಿದ್ದ ಅಂಗವಿಕಲರು ಕಾಯಬೇಕಾದ ಸ್ಥಿತಿ ಎದುರಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಂಜೂರಾದ 49 ತ್ರಿಚಕ್ರ ವಾಹನಗಳ ಪೈಕಿ 14 ಮಾತ್ರ ಉಳಿದಿದ್ದು, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ. ಇದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಎರಡು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಿರ್ಲಕ್ಷೃ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ.
ಹೂವಿನಹಡಗಲಿ ತಾಲೂಕಿಗೆ ಸಂಸದರ ನಿಧಿಯಲ್ಲಿ ಒಟ್ಟು 14 ಯಂತ್ರ ಚಾಲಿತ ತ್ರಿಚಕ್ರಗಳನ್ನು ನೀಡಿದ್ದಾರೆ. ಅವುಗಳನ್ನು ವಿತರಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಫಲಾನುಭವಿಗೆ ನೀಡುವ ಬದಲಿಗೆ ತುಕ್ಕು ಹಿಡಿಸುತ್ತಿದ್ದಾರೆ. ಕೂಡಲೇ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಬೇಕು.
> ಎಸ್.ಚಂದ್ರಪ್ಪ ತಳಕಲ್ಲ ಅಧ್ಯಕ್ಷ ವಿಕಲಚೇತನ ಹಾಗೂ ಪಾಲಕರ ಸಂಘ, ಹೂವಿನಹಡಗಲಿ