ಬುಕ್ಕಸಾಗರದ ಏಳು ಹೆಡೆ ನಾಗಪ್ಪಗೆ ವಿಶೇಷ ಅಲಂಕಾರ ಮಾಡಲಾಯಿತು.
- ನಾಗ ದೇಗುಲ ಸೇರಿದಂತೆ ಇತರೆ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಕೆ
ಹೊಸಪೇಟೆ: ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಅಮಾವಾಸ್ಯೆ ಹಾಗೂ ಭೀಮನ ಅಮಾವಾಸ್ಯೆಯ ಅಂಗವಾಗಿ ವಿವಿಧ ದೇಗುಲಗಳಲ್ಲಿ ಶ್ರದ್ಧಾಭಕ್ತಿಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬುಕ್ಕಸಾಗರದ ಪ್ರಸಿದ್ಧ ಏಳು ಹೆಡೆ ನಾಗಪ್ಪ ದೇಗುಲ ಸೇರಿದಂತೆ ತಾಲೂಕಿನ ಪ್ರಮುಖ ನಾಗಪ್ಪನ ಗುಡಿಗಳಲ್ಲಿ ಮುಂಜಾನೆಯಿAದಲೇ ಭಕ್ತಾದಿಗಳ ದಂಡು ಹರಿದು ಬಂದಿತ್ತು. ದೇಗುಲದಲ್ಲಿ ನಾಗಪ್ಪನ ವಿಗ್ರಹಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ನಾಗಪ್ಪನಿಗೆ ಹಾಲು, ಎಳನೀರು ಎರಚಿ, ಅರಿಶಿನ-ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ನಗರದ ಇತರ ಶಿವ ಮತ್ತು ವಿಷ್ಣು ದೇಗುಲಗಳಲ್ಲೂ ವಿಶೇಷ ಜಪ, ತಪ ಹಾಗೂ ಮಹಾಮಂಗಳಾರತಿ ನೆರವೇರಿದವು.
ಇನ್ನೊಂದೆಡೆ, ಭೀಮನ ಅಮಾವಾಸ್ಯೆಯ ಪವಿತ್ರ ದಿನದಂದು ನವವಧುಗಳು ಹಾಗೂ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಪತಿಯ ಪಾದಪೂಜೆ ನೆರವೇರಿಸಿದರು. ಮನೆಗಳಲ್ಲಿ ದೀಪ ಬೆಳಗಿ, ಪತಿಯ ಪಾದಗಳಿಗೆ ಅರಿಶಿನ-ಕುಂಕುಮ ಹಚ್ಚಿ, ಅಕ್ಷತೆ ಹಾಕಿ ಆಶೀರ್ವಾದ ಪಡೆದರು.